

ನವದೆಹಲಿ: ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ಮೇಲೆ ಹಲವಾರು ಟೀಕೆಗಳು ವ್ಯಕ್ತವಾಗುತ್ತಿದ್ದರೂ ಮೌನವನ್ನು ಮುಂದುವರೆಸಿಕೊಂಡು ಬಂದಿದ್ದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಇದೀಗ ತಮ್ಮ ಮೌನ ಮುರಿದಿದ್ದು, ವ್ಯಾಪಂ ಹಗರಣದ ತನಿಖೆ ನ್ಯಾಯಯುತವಾಗಿ ನಡೆಯಲಿದ್ದು ತನಿಖೆ ಮೇಲೆ ನನಗೆ ಸಂಪೂರ್ಮ ವಿಶ್ವಾಸವಿದೆ ಎಂದು ಬುಧವಾರ ಹೇಳಿದ್ದಾರೆ.
ಈ ಕುರಿತಂತೆ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿರುವ ಅವರು, ವ್ಯಾಪಂ ಹಗರಣ ಬೆಳಕಿಗೆ ಬರುತ್ತಿದ್ದಂತೆಯೇ ತನಿಖೆ ಬಗ್ಗೆ ಚಿಂತನೆ ನಡೆಸಿದಾಗ ಪ್ರಕರಣ ತುಂಬಾ ಆಳವಾಗಿರುವುದು ತಿಳಿಯಿತು. ಹೀಗಾಗಿ ಹಗರಣ ತನಿಖೆಯನ್ನು ಕೂಡಲೇ ರಾಜ್ಯದ ವಿಶೇಷ ತನಿಖಾ ತಂಡಕ್ಕೆ ನೀಡಲಾಯಿತು.
ರಾಜ್ಯದಲ್ಲಿ ಉಂಟಾದ ಬಿಗು ವಾತಾವರಣವೇ ಹಗರಣದ ತನಿಖೆಯನ್ನು ಸಿಬಿಐ ವಶಕ್ಕೆ ಒಪ್ಪಿಸಲು ಕಾರಣವಾಯಿತು. ನನಗೆ ಎಸ್ಐಟಿ ತನಿಖೆ ಮೇಲೆ ಗೌರವವಿದೆ. ಹಗರಣದ ತನಿಖೆ ನ್ಯಾಯಯುತವಾಗಿ ನಡೆಯುತ್ತದೆ ಎಂಬುದರಲ್ಲಿ ನನಗೆ ವಿಶ್ವಾಸವಿದೆ. ಹೀಗಾಗಿ ಹುದ್ದೆಗೆ ರಾಜಿನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ನನ್ನ ಮೇಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಹಾಗೂ ಪಕ್ಷದವರಿಗೆ ಸಂಪೂರ್ಣ ವಿಶ್ವಾಸವಿದ್ದು, ಪಕ್ಷ ನನಗೆ ಸಂಪೂರ್ಣವಾಗಿ ಬೆಂಬಲ ಸೂಚಿಸಿದೆ. ಮೋದಿ ಹಾಗೂ ಅಮಿತ್ ಶಾ ಮತ್ತು ಪಕ್ಷದ ಇನ್ನಿತರೆ ನಾಯಕರನ್ನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿಕಾರಿರುವ ಅವರು, ದಿಗ್ವಿಜಯ್ ಸಿಂಗ್ ಒಬ್ಬ ವಿಧೂಷಕನಿದ್ದಂತೆ. ಸತ್ಯ ಎಂದಿಗೂ ಮರೆಮಾಚಲು ಸಾಧ್ಯವಿಲ್ಲ. ಒಂದಲ್ಲ ಒಂದು ದಿನ ಹೊರ ಬರಲೇಬೇಕು ಎಂದು ಹೇಳಿದ್ದಾರೆ.