

ಲಖನೌ: ಪತ್ರಕರ್ತರು ಕೊಲೆಯಾಗುತ್ತಿದ್ದ ಉತ್ತರ ಪ್ರದೇಶದಲ್ಲಿ ಈಗ ಸರ್ಕಾರಿ ಅಧಿಕಾರಿಗಳ ಚಾರಿತ್ರ್ಯ ವಧೆ ನಡೆಯುತಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ವಿರುದ್ಧ ಬೆದರಿಕೆ ದೂರು ದಾಖಲಿಸಿರುವ ಉತ್ತರ ಪ್ರದೇಶ ಐಪಿಎಸ್ ಅಧಿಕಾರಿ ಅಮಿತಾಬ್ ಠಾಕೂರ್ ವಿರುದ್ಧ ಅತ್ಯಾಚಾರದ ಆರೋಪ ಕೇಳಿಬಂದಿದೆ.
ಅತ್ಯಾಚಾರ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಅಮಿತಾಬ್ ಠಾಕೂರ್, ತಾವು ಮುಲಾಯಂ ಸಿಂಗ್ ಯಾದವ್ ಅವರ ವಿರುದ್ಧ ಬೆದರಿಕೆ ಹಾಕಿದ ದೂರು ದಾಖಲಿಸಿರುವುದಕ್ಕೆ ಸಮಾಜವಾದಿ ಪಕ್ಷ ನನ್ನ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿದೆ ಎಂದು ಹೇಳಿದ್ದಾರೆ.
"ಅತ್ಯಾಚಾರ ನಡೆಸಿದ್ದೇನೆ ಎಂಬುದು ಕಾಲ್ಪನಿಕ ಕಥೆ, ಇದು ಮುಲಾಯಂ ಸಿಂಗ್ ಯಾದವ್ ವಿರುದ್ಧ ದೂರು ನೀಡಿರುವುದಕ್ಕೆ ನನಗೆ ಸಮಾಜವಾದಿ ಪಕ್ಷ ನೀಡಿರುವ ಉಡುಗೊರೆ ಎಂದಿದ್ದಾರೆ ಅಮಿತಾಬ್ ಠಾಕೂರ್. ಮುಲಾಯಂ ಸಿಂಗ್ ಯಾದವ್ ವಿರುದ್ಧ ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿದ ಆರೋಪದಡಿ ಎಫ್.ಐ.ಆರ್ ದಾಖಲಿಸಿದ ನಂತರ ಈ ಆರೋಪ ಕೇಳಿಬಂದಿದ್ದು ಇದು ಕಾಲ್ಪನಿಕ ಕಥೆ ಎಂಬುದು ಸ್ಪಷ್ಟ ಎಂದು ಅಮಿತಾಬ್ ತಿಳಿಸಿದ್ದಾರೆ.
ತಮ್ಮ ವಿರುದ್ಧ ಎಫ್.ಐ.ಆರ್ ದಾಖಲಾಗಿರುವುದನ್ನು ಸ್ವಾಗತಿಸಿರುವ ಅಮಿತಾಬ್ ಠಾಕೂರ್, ಈ ಬಗ್ಗೆ ಉತ್ತರ ಪ್ರದೇಶ ಪೊಲೀಸರಿಂದ ತನಿಖೆ ನಡೆಯದೇ ಸಿಬಿಐ ತನಿಖೆ ನಡೆಯಬೇಕು ಎಂದು ಹೈಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.