

ಭೋಪಾಲ್: ಮಧ್ಯಪ್ರದೇಶ ಸಿಎಂ ಶಿವ ರಾಜ್ ಸಿಂಗ್ ಚೌಹಾಣ್‍ರ ಕೊರಳಿಗೆ ಸುತ್ತಿ ಕೊಂಡಿರುವ ವ್ಯಾಪಂ ಹಗರಣದ ಉರುಳು ದಿನೇ ದಿನೇ ಬಿಗಿಯಾಗುತ್ತಿದೆ. ಚೌಹಾಣ್ ಉದ್ದೇಶಪೂರ್ವಕವಾಗಿಯೇ ವ್ಯಾಪಂ ತನಿಖೆಯನ್ನು ವಿಳಂಬವಾಗಿಸಿದ್ದಾರೆಯೇ ಎಂಬ ಹೊಸ ಅನುಮಾನ ಈಗ ಮೂಡಿದೆ. ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಚೌಹಾಣ್ ಸರ್ಕಾರ ಬೇಕಂತಲೇ ವಿಳಂಬ ಮಾಡಿದೆ ಎನ್ನುವುದಕ್ಕೆ ಪುಷ್ಟಿ ನೀಡುವ ಹಲವು ದಾಖಲೆಗಳು ಸಿಕ್ಕಿವೆ ಎಂದು ಎನ್‍ಡಿಟಿವಿ ವರದಿ ಮಾಡಿದೆ.
ಹಾರಿಕೆಯ ಉತ್ತರವೇ ಹೆಚ್ಚು: 8 ವರ್ಷ ಗಳಲ್ಲಿ ಮಧ್ಯಪ್ರದೇಶ ವಿಧಾನಸಭೆಯಲ್ಲಿ 3 ಬಾರಿ ವ್ಯಾಪಂಗೆ ಸಂಬಂ„ಸಿದ ಪ್ರಶ್ನೆಗಳನ್ನು ಎತ್ತಲಾಗಿತ್ತು. ಮುಖ್ಯಮಂತ್ರಿಗಳಿಗೆ ಈ ಕುರಿತು 17 ಪತ್ರಗಳನ್ನೂ ಬರೆಯಲಾಗಿತ್ತು. ಆದರೆ, ಸರ್ಕಾರ ಪ್ರತಿ ಬಾರಿಯೂ ಹಾರಿಕೆ ಉತ್ತರಗಳನ್ನು ನೀಡುತ್ತಿತ್ತು ಎಂದು ಪ್ರತಿಪಕ್ಷ ನಾಯಕರು ಆರೋಪಿಸಿದ್ದಾರೆ.
-2009ರಲ್ಲಿ ಪಕ್ಷೇತರ ಶಾಸಕ ಪರಸ್ ಸಕ್ಲೇಚಾ ಅವರು, ``ವ್ಯಾಪಂನಲ್ಲಿ ಏನಾ ದರೂ ಅವ್ಯವಹಾರ ನಡೆದಿದೆಯೇ'' ಎಂದು ವಿಧಾನಸಭೆಯಲ್ಲಿ ಪ್ರಶ್ನಿಸಿದ್ದರು. ಅದಕ್ಕೆ ಉತ್ತರಿಸಿದ್ದ ಸರ್ಕಾರ, ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದಷ್ಟೇ ಹೇಳಿತ್ತು.
- 2011ರ ನವೆಂಬರ್‍ನಲ್ಲಿ ಪ್ರತಿಪಕ್ಷಗಳು ವಿಚಾರ ಪ್ರಸ್ತಾಪಿಸಿದಾಗ ಸರ್ಕಾರವು, ತಪ್ಪಾಗಿ ಪ್ರವೇಶ ಪಡೆದ 114 ವಿದ್ಯಾರ್ಥಿಗಳ ವಿವರ ಸಿಕ್ಕಿದೆ ಎಂದಿತ್ತು. ಪ್ರತಿ ಬಾರಿಯೂ ತನಿಖೆ ನಡೆಯುತ್ತಿದೆ ಎಂದಿತೇ ವಿನಾ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ವಿಶೇಷ ತಂಡ ರಚನೆ
ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಸಿಬಿಐ 40 ಅಧಿಕಾರಿಗಳು ಇರುವ ವಿಶೇಷ ತಂಡ ವನ್ನು ರಚಿಸಿದೆ. ಜಂಟಿ ನಿರ್ದೇಶಕರ ರ್ಯಾಂಕ್‍ನ ಅಧಿಕಾರಿ ಅದನ್ನು ಮುನ್ನೆಡಸಲಿದ್ದಾರೆ. ವಿವಿಧ ಇಲಾ ಖೆಗಳಲ್ಲಿರುವ ಪ್ರಮುಖರು ಅದ ರಲ್ಲಿ ಇರಲಿದ್ದಾರೆ. ಸೋಮವಾರ ಅದು, ಭೋಪಾಲ್ ತಲುಪಲಿದೆ.
ಹಣದಲ್ಲೇ ಮಲಗುತ್ತಿದ್ದ!
ಹಗರಣದ ಕಿಂಗ್‍ಪಿನ್ ಡಾ. ಜಗದೀಶ್ ಸಾಗರ್ ಈ ದಂಧೆ ಮೂಲಕವೇ ನೂರಾರು ಕೋಟಿ ಸಂಪಾದಿಸಿದ್ದಾನೆ. ಹಣದ ಹುಚ್ಚು ಈತನಿಗೆ ಎಷ್ಟರಮಟ್ಟಿಗೆ ಇತ್ತೆಂದರೆ, ಸಾಗರ್ ತನ್ನ ಬಂಗಲೆಯಲ್ಲಿ ಹಣದ ಹಾಸಿಗೆ ಮೇಲೆ ಮಲಗುತ್ತಿದ್ದ. ಇಂದೋರ್‍ನಲ್ಲಿ ಅರಮನೆಯಂತಹ ಬಂಗಲೆ, ಹಲವು ನಿವೇಶನಗಳು, ಗ್ವಾಲಿಯರ್ ಮತ್ತು ಭೀಂಡ್‍ನಲ್ಲಿ ಕೃಷಿ ಭೂಮಿ, ದುಬಾರಿ ಕಾರುಗಳನ್ನು ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದ. ಒಂದೊಮ್ಮೆ ಹಗರಣ ಕ್ಕೆ ಸಂಬಂಧಿಸಿ ಬಂಧಿತನಾಗಿದ್ದರೂ ನಗುತ್ತಾ, `ನಾನು ಸುಲಭವಾಗಿ ಬೇಗನೆ ಹೊರಬರುತ್ತೇನೆ' ಎಂದು ಮಾಧ್ಯಮಗಳ ಮುಂದೆ ಘೋಷಿಸಿದ್ದ.