

ನವದೆಹಲಿ: ಸರ್ಕಾರಿ ಪ್ರಯೋಗಾಲಯದಲ್ಲಿ ಪ್ರಮುಖ ಪರೀಕ್ಷೆಯನ್ನು ನಡೆಸಲು ಸರಿಯಾದ ಉಪಕರಣಗಳು ಇಲ್ಲದಿರುವುದರಿಂದ ಮ್ಯಾಗಿ ನೂಡಲ್ಸ್ ನ್ನು ನಿಷೇಧಿಸಿ ನ್ಯಾಯಾಲಯ ನೀಡಿರುವ ಆದೇಶವನ್ನು ಹಿಂತೆಗೆದುಕೊಳ್ಳಬೇಕೆಂದು ಸ್ವಿಜರ್ಲೆಂಡ್ ಮೂಲದ ನೆಸ್ಲೆ ಇಂಡಿಯಾ ಕಂಪೆನಿ ಮುಂಬೈ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆ.
ಮ್ಯಾಗಿ ಕಂಪೆನಿ ಪರ ವಕೀಲ ಮುಂಬೈ ಹೈಕೋರ್ಟ್ ನಲ್ಲಿ ವಾದ ಮಂಡಿಸಿ, ಪಶ್ಚಿಮ ಬಂಗಾಳ, ಪುಣೆ, ದೆಹಲಿಗಳಲ್ಲಿನ ಪ್ರಯೋಗಾಲಯಗಳಲ್ಲಿ ಸೀಸದ ಅಂಶವನ್ನು ಪರೀಕ್ಷಿಸುವಷ್ಟು ಪ್ರಯೋಗಾಲಯಗಳು ಉತ್ತಮ ಮಟ್ಟದಲ್ಲಿಲ್ಲ. ಗುಜರಾತ್ ನ ವಡೋದರಾ, ರಾಜಕೋಟ್ ಮತ್ತು ಉತ್ತರಾಖಂಡ್ ರಾಜ್ಯಗಳ ಪ್ರಯೋಗಾಲಯಗಳಲ್ಲಿ ಲ್ಯಾಬ್ ಪರೀಕ್ಷೆಗೆ ಮಾನ್ಯತೆ ಇಲ್ಲ. ಎರಡು ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಿದಾಗ ಬೇರೆ ಬೇರೆ ಫಲಿತಾಂಶ ಬಂದಿದೆ ಎಂದು ವಾದಿಸಿದರು.
ಮ್ಯಾಗಿ ನೂಡಲ್ಸ್ ನಲ್ಲಿ ಸೀಸದ ಅಂಶ ನಿಗದಿತ ಪ್ರಮಾಣಕ್ಕಿಂತ ಅಧಿಕವಿದ್ದು, ಈ ಆಹಾರ ತಿನ್ನಲು ಸುರಕ್ಷಿತವಲ್ಲ. ನೆಸ್ಲೆ ಕಂಪೆನಿ ನೂಡಲ್ಸ್ ತಯಾರಿಸುವಾಗ ಆಹಾರ ಸುರಕ್ಷತಾ ನಿಯಮಗಳನ್ನು ಸರಿಯಾಗಿ ಪಾಲಿಸಿಲ್ಲ ಎಂದು ಆಪಾದಿಸಿ ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ವರದಿ ನೀಡಿತ್ತು. ಅದರಂತೆ ನೆಸ್ಲೆ ಕಂಪೆನಿಯ 9 ನಮೂನೆಯ ನೂಡಲ್ಸ್ ಆಹಾರಗಳನ್ನು ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳಲಾಗಿತ್ತು.