

ನವದೆಹಲಿ: 19 ವರ್ಷದ ಯುವತಿಯೊಬ್ಬಳು ಚುಡಾಯಿಸಿದ್ದನ್ನು ಪ್ರತಿಭಟಿಸಿದ್ದಲ್ಲದೆ ಪೊಲೀಸರಿಗೆ ದೂರು ನೀಡಿದ್ದಕ್ಕೆ ಕ್ರೋಧ ಕೊಂಡ ಸಹೋದರರಿಬ್ಬರು ಆಕೆಗೆ 35 ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಭೀಕರ ಘಟನೆ ಇಲ್ಲಿನ ಆನಂದ್ ಪ್ರಭಾತ್ ಪ್ರದೇಶದಲ್ಲಿ ನಡೆದಿದೆ.
ಯುವತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಜೈ ಪ್ರಕಾಶ್ ಮತ್ತು ಆತನ ಸೋದರ ಅಜಯ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ತ ಯುವತಿ ಮೀನಾಕ್ಷಿ, ಸಹೋದರರಾದ ಪ್ರಕಾಶ್ ಮತ್ತು ಅಜಯ್ ಎಂಬುವರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಳು. ಇದರಿಂದ ಕೆರಳಿದ ಸಹೋದರರು ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲು ಹೊಂಚು ಹಾಕಿದ್ದರು.
ಅದರಂತೆ ಗುರುವಾರ ಸಂಜೆ ಯುವತಿ ಮಾರುಕಟ್ಟೆಯಿಂದ ಆನಂದ್ ವಿಹಾರ ಪ್ರದೇಶದಲ್ಲಿರುವ ತನ್ನ ಮನೆಗೆ ಬರುತ್ತಿದ್ದಾಗ ಮತ್ತೆ ಆಕೆಯನ್ನು ಚುಡಾಯಿಸಲು ಮುಂದಾದರು. ಇದಕ್ಕೆ ಪ್ರತಿರೋಧ ತೋರಿದ ಯುವತಿ ಅವರಿಂದ ತಪ್ಪಿಸಿಕೊಂಡು ತನ್ನ ಪಕ್ಕದ ಮನೆಗೆ ನುಗ್ಗಿದ್ದಾಳೆ. ಆದರೆ, ಆಕೆಯನ್ನು ಅವರು ಒಳಗೆ ಸೇರಿಸಿಕೊಳ್ಳದೇ ಹೊರಗೆ ತಳ್ಳಿದ್ದಾರೆ.
ಬಳಿಕ ಸೋದರರು ಆಕೆಯನ್ನು ಓಡಿಸಿಕೊಂಡು ಹೋಗಿ 35 ಬಾರಿ ಚಾಕುವಿನಿಂದ ಇರಿದಿದ್ದಾರೆ. ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.