

ರಾಜಸ್ಥಾನ: ಶಿಕ್ಷಕರ ಮನೆ ಕೆಲಸ ಮಾಡಿಕೊಡಲು ನಿರಾಕರಿಸಿದ 10 ನೇ ತರಗತಿಯ ವಿದ್ಯಾರ್ಥಿಯನ್ನು ಶಾಲೆಯಿಂದ ಹೊರಹಾಕಲಾಗಿರುವ ಘಟನೆ ರಾಜಸ್ಥಾನದ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ತಾನು 6 ನೇ ತರಗತಿಯಲ್ಲಿದ್ದಾಗಿನಿಂದಲೂ ಒತ್ತಾಯ ಪೂರ್ವಕವಾಗಿ ಮನೆ ಕೆಲಸ ಮಾಡಿಸುತ್ತಿದ್ದರು ಎಂದು ಸರ್ಕಾರಿ ಶಾಲೆಯಲ್ಲಿ 10 ನೇ ತರಗತಿ ಓದುತ್ತಿರುವ ವಿದ್ಯಾರ್ಥಿ ಲಾಲು ಸಿಂಗ್ ಹಿಂದುಸ್ತಾನ್ ಟೈಮ್ಸ್ ಗೆ ನೀಡಿರುವ ಸಂದರ್ಶನದಲ್ಲಿ ಆರೋಪಿಸಿದ್ದಾನೆ. ತನ್ನೆಲ್ಲಾ ಸಹಪಾಠಿಗಳು ತರಗತಿಗಳಿಗೆ ಹಾಜರಾಗುತ್ತಿದ್ದಾರೆ ತಾನು ಮಾತ್ರ ಶಿಕ್ಷಕರ ಮನೆಯಲ್ಲಿ ಕೆಲಸ ಮುಗಿಸಬೇಕಿತ್ತು ಎಂದು ಲಾಲ್ ಸಿಂಗ್ ದೂರಿದ್ದಾನೆ.
ಒಂದು ವೇಳೆ ಮನೆ ಕೆಲಸ ಮಾಡಲು ನಿರಾಕರಿಸಿದರೆ ಶಿಕ್ಷಕರು ಥಳಿಸುತ್ತಿದ್ದರು. ಮನೆ ಕೆಲಸ ಮಾಡಲು ನಿರಾಕರಿಸಿದ್ದು ಮರುಕಳಿಸಿದ ಹಿನ್ನೆಲೆಯಲ್ಲಿ ಜು.13 ರಂದು ನನ್ನನ್ನು ಪ್ರಾಂಶುಪಾಲರ ನೆರವಿನಿಂದ ಶಾಲೆಯಿಂದ ಹೊರಹಾಕಲಾಗಿದೆ ಎಂದು ಲಾಲ್ ಸಿಂಗ್ ಹೇಳಿದ್ದಾನೆ.
ಆದರೆ ಈ ಆರೋಪವನ್ನು ನಿರಾಕರಿಸಿರುವ ಶಾಲಾ ಆಡಳಿತ ಮಂಡಳಿ, ವಿದ್ಯಾರ್ಥಿಯ ಕೆಟ್ಟ ವರ್ತನೆಯಿಂದ ಆತನನ್ನು ಶಾಲೆಯಿಂದ ಹೊರಹಾಕಲಾಗಿದೆ ಎಂದು ಉತ್ತರಿಸಿದೆ.ಈ ಘಟನೆ ಬಗ್ಗೆ ಪ್ರಕರಣ ದಾಖಲಾಗಿದ್ದು ಜಿಲ್ಲಾ ಶಿಕ್ಷಣ ಇಲಾಖೆಯಿಂದ ತನಿಖೆ ನಡೆಯುತ್ತಿದೆ.