

ನವದೆಹಲಿ: ಪಂಜಾಬ್ ನಲ್ಲಿ ದಾಳಿ ನಡೆಸಿದ್ದ ಉಗ್ರರು, ಜಮ್ಮು ಹಾಗೂ ಪಠಾಣ್ ಕೋಟ್ ನ ಭಾಗದಲ್ಲಿರುವ ಬೇಲಿ ರಹಿತ ಗಡಿ ಪ್ರದೇಶದ ಮೂಲಕ ಪಾಕಿಸ್ತಾನದಿಂದ ಭಾರತಕ್ಕೆ ನುಸುಳಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.
ಜಮ್ಮು-ಪಠಾಣ್ ಕೋಟ್ ಗಡಿ ಪ್ರದೇಶದಿಂದ ಉಗ್ರರು ನುಸುಳುವ ಸಾಧ್ಯತೆ ಬಗ್ಗೆ ಗುಪ್ತಚರ ಇಲಾಖೆಗೂ ಮಾಹಿತಿ ಇತ್ತು. ಈ ವರೆಗೂ ದಾಳಿ ನಡೆಸಿರುವ ಉಗ್ರ ಸಂಘಟನೆ ಯಾವುದೆಂದು ಸ್ಪಷ್ಟವಾಗಿ ತಿಳಿದಿಲ್ಲ. ಆದರೆ ಜಮ್ಮು ಭಾಗದ ಕಟುವಾದಲ್ಲಿ ನಡೆದ ಆತ್ಮಾಹುತಿ ದಾಳಿಗೂ ಈ ದಾಳಿಗೂ ಸಾಮ್ಯತೆ ಇದ್ದು, ಇದು ಪಾಕಿಸ್ತಾನದಿಂದ ನುಸುಳಿರುವ ಉಗ್ರರ ಕೃತ್ಯ ಎಂಬುದು ಸ್ಪಷ್ಟವಾಗಿದೆ.
ಪಂಜಾಬ್ ನಲ್ಲಿ ನಡೆಸಿದಂತೆ ಜಮ್ಮು-ಕಾಶ್ಮೀರದ ಪೊಲೀಸ್ ಠಾಣೆಗೂ ನುಗ್ಗಿ ದಾಳಿ ನಡೆಸಿದ್ದ ಉಗ್ರರು, 3 ಭದ್ರತಾ ಸಿಬ್ಬಂದಿಗಳನ್ನು ಸೇರಿದಂತೆ ಆರು ಜನರನ್ನು ಹತ್ಯೆ ಮಾಡಿದ್ದರು. ಇದಾದ ನಂತರ ಜಮ್ಮು-ಕಾಶ್ಮೀರದಲ್ಲಿ ಸೇನೆಯ ಗುಂಡಿಗೆ ಉಗ್ರರು ಬಲಿಯಾಗಿದ್ದರು. ಇದೀಗ ಇಂಥದ್ದೇ ದಾಳಿ ಪಂಜಾಬ್ ಪ್ರದೇಶದಲ್ಲೂ ನಡೆದಿದೆ.
ಪಂಜಾಬ್ ಗೆ ಹೊಂದಿಕೊಂಡಿರುವ ಜಮ್ಮು-ಕಾಶ್ಮೀರದ ಗಡಿ ಭಾಗದಿಂದ ಸೇನಾ ಸಮವಸ್ತ್ರ ಧರಿಸಿ ಉಗ್ರರು ಪಂಜಾಬ್ ಗೆ ಪ್ರವೇಶಿಸಿದ್ದು, ಬೆಳಿಗ್ಗೆ 5 :30 ಕ್ಕೆ ಟೆಂಪೋ ಒಂದನ್ನು ಅಪಹರಿಸಲು ಯತ್ನಿಸಿದ್ದಾರೆ. ಆದರೆ ಟೆಂಪೋ ಚಾಲಕ ತಪ್ಪಿಸಿಕೊಂಡಿದ್ದಾನೆ. ಆ ನಂತರ ಪಂಜಾಬ್ ನೋಂದಣಿ ಇರುವ ಮಾರುತಿ 800 ಕಾರನ್ನು ಉಗ್ರರು ಅಪಹರಿಸಿ ದಾಳಿ ನಡೆಸಿದ್ದಾರೆ. ಜಮ್ಮು ಪ್ರದೇಶದಲ್ಲಿ ಸೇನಾ ಭದ್ರತೆ ಹೆಚ್ಚಿದ್ದ ಕಾರಣ ಪಂಜಾಬ್ ಹಾಗೂ ಹಿಮಾಚಲ ಪ್ರದೇಶವನ್ನು ಉಗ್ರರು ಗುರಿಯಾಗಿರಿಸಿಕೊಂಡಿದ್ದಾರೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.