ಹೈದರಾಬಾದ್: ಇಸ್ಲಾಮಿಕ್ ಸ್ಟೇಟ್ ಉಗ್ರರಿಂದ ಅಪಹೃತಗೊಂಡಿದ್ದ ನಾಲ್ವರು ಭಾರತೀಯರ ಪೈಕಿ ಕನ್ನಡಿಗರಿಬ್ಬರು ಬಿಡುಗಡೆಗೊಂಡಿದ್ದು, ಹೈದರಾಬಾದ್ ನ ಮತ್ತಿಬ್ಬರ ಬಿಡುಗಡೆ ಬಗ್ಗೆ ಯಾವುದೇ ಮಾಹಿತಿ ಇಲ್ಲದಿರುವುದು ಆತಂಕ್ಕೀಡು ಮಾಡಿದೆ.
ಲಿಬಿಯಾದ ಟ್ರೈಪೋಲಿಯ ಸಿರ್ತೆ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದ ನಾಲ್ವರು ಭಾರತೀಯರನ್ನು ಗುರುವಾರ ಸಂಜೆ ಉಗ್ರರು ಅಪಹರಿಸಿದ್ದರು. ಬಳಿಕ ಕನ್ನಡಿಗರಾದ ಲಕ್ಷ್ಮಿಕಾಂತ್ ಹಾಗೂ ವಿಜಯ್ ಕುಮಾರ್ ಬಿಡುಗಡೆಯಾಗಿದ್ದು, ಅವರಿಬ್ಬರು ಸುರಕ್ಷಿತರಾಗಿದ್ದಾರೆ ಎಂದು ವಿದೇಶಾಂಗ ಇಲಾಖೆ ನಿನ್ನೆ ಸ್ಪಷ್ಟಪಡಿಸಿತ್ತು.
ಆಂಧ್ರಪ್ರದೇಶ ಮೂಲದವರಾದ ಬಲರಾಮ್ ಮತ್ತು ಗೋಪಿಕೃಷ್ಣ ಅವರ ಬಂಧುಗಳಿಗೆ ಅವರು ಬಿಡುಗಡೆಯಾಗಿರುವ ಬಗ್ಗೆ ಶುಕ್ರವಾರ ಎಸ್ಎಂಎಸ್ ಬಂದಿದ್ದು, ಮತ್ಯಾವುದೇ ಮಾಹಿತಿ ಸಿಕ್ಕದೆ ಆತಂಕ್ಕೀಡಾಗಿದ್ದೇವೆ ಎಂದು ಬಲರಾಮಕೃಷ್ಣರ ಕುಟುಂಬದವರಾದ ಶ್ರೀದೇವಿ ಎಂಬುವರು ಆತಂಕ ವ್ಯಕ್ತಪಡಿಸಿದ್ದಾರೆ.
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಶುಕ್ರವಾರ ರಾತ್ರಿ ಅಪಹೃತಗೊಂಡಿರುವ ನಾಲ್ವರ ಪೈಕಿ ಇಬ್ಬರು ಬಿಡುಗಡೆಗೊಂಡಿದ್ದು, ಮತ್ತಿಬ್ಬರ ಬಿಡುಗಡೆಗಾಗಿ ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದ್ದರು.
ಹೈದರಾಬಾದ್ ನ ಗೋಪಿಕೃಷ್ಣ ಅವರು 2007 ರಿಂದ ಜಫ್ರಾ ಬ್ರಾಂಬ್ ಆಫ್ ಯೂನಿವರ್ಸಿಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮತ್ತೊಬ್ಬರಾದ ಬಾಲರಾಮ್ 2011ರಿಂದ ಇಂಗ್ಲಿಷ್ ಬೋಧಕರಾಗಿದ್ದರು ಎಂದು ತಿಳಿದುಬಂದಿದೆ.