

ನವದೆಹಲಿ: ಪಂಜಾಬ್‌ನ ಗುರುದಾಸ್ ಪುರದಲ್ಲಿ ಉಗ್ರರ ದಾಳಿ ಹಾಗೂ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಕುರಿತು ಪಾಕಿಸ್ತಾನದ ಅಣು ವಿಜ್ಞಾನಿ ಎ.ಕ್ಯು. ಖಾನ್ ಅಪಮಾನಕರ ಹೇಳಿಕೆ ಖಂಡಿಸಿ ಪಾಕಿಸ್ತಾನ ವಿರುದ್ಧ ಯುವ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು.
ಗುರುದಾಸ್ ಪುರದಲ್ಲಿ ಉಗ್ರರ ದಾಳಿ ಹಾಗೂ ಅಬ್ದುಲ್ ಕಲಾಂ ಅವರ ಕುರಿತು ಎ.ಕ್ಯು. ಖಾನ್ ಹೇಳಿಕೆ ಕುರಿತು ಪಾಕಿಸ್ತಾನ ಪ್ರಧಾನಮಂತ್ರಿ ಕ್ಷಮೆಯಾಚಿಸಬೇಕು ಎಂದು ದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಸದಸ್ಯರು ಆಗ್ರಹಿಸಿದರು.
ಪಾಕಿಸ್ತಾನವು ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಉಗ್ರರಿಗೆ ಬೆಂಬಲ ನೀಡುತ್ತಿದ್ದು, ಭಾರತದ ಅತ್ಯುನ್ನತ ವಿಜ್ಞಾನಿ ಅಬ್ದುಲ್ ಕಲಾಂರನ್ನು ಸಾಮಾನ್ಯ ವಿಜ್ಞಾನಿ ಎಂದು ಎ.ಕ್ಯು. ಖಾನ್ ಕರೆದು ಅಪಮಾನಿಸಿರುವುದು ಭಾರತೀಯರಿಗೆ ಮಾಡಿರುವ ಅಪಮಾನ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಗ್ರರ ದಾಳಿ ಹಾಗೂ ಖಾನ್ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಭಾರತ ಸರ್ಕಾರವು ಪಾಕಿಸ್ತಾನದ ಜತೆಗಿನ ಸ್ನೇಹ ಸಂಬಂಧವನ್ನು ಕೊನೆಗೊಳಿಸಿ ತಕ್ಕ ಪ್ರತ್ಯುತ್ತರ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.