

ನವದೆಹಲಿ: ಲೋಕಸಭಾ ಚುನಾವಣೆಯ ಖರ್ಚುವೆಚ್ಚದ ವಿವರ ನೀಡುವಲ್ಲಿ ವಿಫಲರಾದ ನರೇಂದ್ರ ಮೋದಿ ಅವರು ಸಂಸತ್ ಸದಸ್ಯತ್ವವನ್ನು ಅನರ್ಹಗೊಳಿಸುವಂತೆ ಎಐಸಿಸಿ ಕಾನೂನು ಘಟಕದ ಕಾರ್ಯದರ್ಶಿ ಕೆಸಿ ಮಿತ್ತಲ್ ಹೇಳಿದ್ದಾರೆ.
ವಾರಾಣಸಿ ಲೋಕಸಭಾ ಚುನಾವಣೆಯ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ವೆಚ್ಚದ ಸರಿಯಾದ ಹಾಗೂ ನಿಜವಾದ ವಿವರಗಳನ್ನು ನೀಡುವಲ್ಲಿ ವಿಫಲರಾಗಿದ್ದಾರೆ. ಇದರಿಂದಾಗಿ ಚುನಾವಣಾ ನೀತಿ-ಸಂಹಿತೆ ಉಲ್ಲಂಘನೆಯಾಗಿದೆ. ಆದ್ದರಿಂದ ಮೋದಿಯವರ ಸಂಸತ್ ಸದಸ್ಯತ್ವ ಅನರ್ಹಗೊಳಿಸಬೇಕು ಎಂದು ಎಐಸಿಸಿ ಕಾನೂನು ಘಟಕದ ಕಾರ್ಯದರ್ಶಿ ಕೆಸಿ ಮಿತ್ತಲ್ ತಮ್ಮ ಪಕ್ಷದ ಸದಸ್ಯರ ಪರವಾಗಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ದೂರು ಪಡೆದಿರುವ ಆಯೋಗ ವಿಷಯವನ್ನು ಪರಿಶೀಲಿಸುವುದಾಗಿ ತಿಳಿಸಿದೆ. ಚುನಾವಣೆ ಕಚೇರಿಯಾಗಿ 14 ಅಂತಸ್ತುಗಳ ಕಟ್ಟಡವನ್ನು ಬಾಡಿಗೆ ಹಿಡಿದಿದ್ದಲ್ಲದೆ, ಕಚೇರಿಯ ನವೀಕರಣಕ್ಕೆ 2 ಕೋಟಿ ವೆಚ್ಚಮಾಡಿದ್ದಾರೆ ಎಂದು ಮಿತ್ತಲ್ ದೂರಿದ್ದಾರೆ. ಆರೆಸ್ಸೆಸ್ ಮೋದಿ ಪರವಾಗಿ ಚುನಾವಣಾ ಪ್ರಚಾರ ಮಾಡಿದ ಖರ್ಚಿನ ಲೆಕ್ಕವನ್ನೂ ಕೇಳಿರುವ ಕಾಂಗ್ರೆಸ್, ಮೋದಿಯ ಪ್ರಯಾಣವೆಚ್ಚಗಳನ್ನೂ ನೀಡಬೇಕು ಎಂದು ಒತ್ತಾಯಿಸಿದೆ.