

ಉತ್ತರಾಖಂಡ್ : ದೇಶಾದ್ಯಂತ ಈಗ ಮ್ಯಾಗಿ ನೂಡಲ್ಸ್ ನದ್ದೇ ಸುದ್ದಿ. ಪ್ರತಿಗಂಟೆಗೊಮ್ಮೆ ಮ್ಯಾಗಿಗೆ ಸಂಬಂಧಿಸಿದಂತೆ ಹೊಸ ಹೊಸ ನ್ಯೂಸ್ ಅಪ್ ಡೇಟ್ ಆಗ್ತಾನೇ ಇದೆ. ಈಗ ಸದ್ಯದ ಸುದ್ದಿ ಉತ್ತರಾಖಂಡ್ ನಲ್ಲಿ ಮ್ಯಾಗಿಗೆ ನಿಷೇಧ ಹೇರಿರುವುದು.
ಉತ್ತರಾಖಂಡದ ಆಹಾರ ಲ್ಯಾಬೋರೇಟರಿಯಲ್ಲಿ ನಡೆಸಿದ 300 ಮ್ಯಾಗಿ ಸ್ಯಾಂಪಲ್ ಗಳಲ್ಲಿ ಹೆಚ್ಚಿನ ಪ್ರಮಾಣದ ಮೋನೊಸೋಡಿಯಂ ಗ್ಲುಟಮೇಟ್ ಇರುವುದು ಕಂಡು ಬಂದಿದೆ. ಹೀಗಾಗಿ ಮುಂದಿನ 90 ದಿನಗಳು ಅಂದರೆ ಮೂರು ತಿಂಗಳ ಕಾಲ ಮ್ಯಾಗಿ ಮಾರಾಟಕ್ಕೆ ನಿಷೇಧ ಹೇರಿ ಉತ್ತರಾಖಂಡ್ ಸರ್ಕಾರ ಆದೇಶ ಹೊರಡಿಸಿದೆ.
ರಾಜಸ್ತಾನದಲ್ಲೂ ಮ್ಯಾಗಿ ಪರೀಕ್ಷೆ: ಎಲ್ಲಾ ರಾಜ್ಯಗಳಲ್ಲೂ ಮ್ಯಾಗಿ ಪರೀಕ್ಷೆ, ನಿಷೇಧ ಆರಂಭಿಸಿದ ಮೇಲೆ ರಾಜಸ್ತಾನ ಕೂಡ ಎಚ್ಚೆತ್ತುಕೊಂಡಿದೆ. ದೇಶಾದ್ಯಂತ ಜನಪ್ರಿಯ ತಿನಿಸು ಮ್ಯಾಗಿ ಪರೀಕ್ಷೆ ಮಾಡಲು ಸಿದ್ಧತೆ ನಡೆಸಿದೆ.
ಎಲ್ಲಾ ಜಿಲ್ಲೆಗಳಲ್ಲಿಯೂ ಮ್ಯಾಗಿ ಪರೀಕ್ಷೆ ನಡೆಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಪ್ರತಿ ಜಿಲ್ಲೆಯಲ್ಲೂ ವಿವಿಧ ದಿನಾಂಕಗಳಲ್ಲಿ ತಯಾರಾಗಿರುವ ಮ್ಯಾಗಿ ಸ್ಯಾಂಪಲ್ಸ್ ಗಳನ್ನು ತಂದು ಪರೀಕ್ಷಿಸುವಂತೆ ವಿಶೇಷ ಅಭಿಯಾನ ಆರಂಭಿಸಲಾಗಿದೆ ಎಂದು ರಾಜಸ್ತಾನ ಔಷಧ ಮತ್ತು ಆಹಾರ ಇಲಾಖೆಯ ಹೆಚ್ಚುವರಿ ನಿರ್ದೇಶಕ ಆದಿತ್ಯ ಅಟ್ರೆ ತಿಳಿಸಿದ್ದಾರೆ.