'ವರ್ಷ'ಕ್ಕೆ ವಕ್ರದೃಷ್ಠಿ

ಪ್ರಧಾನಿ ಮೋದಿ ಪಾಕಿಸ್ತಾನದ ಜೊತೆ ಉತ್ತಮ ಸಂಬಂಧ ಬೆಳಸಿಕೊಳ್ಳಲು ಎಲ್ಲ ತಯಾರಿಗಳು ಮಾಡುತ್ತಿದ್ದರೆ, ಪಾಕಿಸ್ತಾನ ಮಾತ್ರ ತನ್ನ ನರಿ ಬುದ್ಧಿ ಬಿಡುತ್ತಿಲ್ಲ.
ವರ್ಷ ಯೋಜನೆ
ವರ್ಷ ಯೋಜನೆ
Updated on: 

ನವದೆಹಲಿ: ಪ್ರಧಾನಿ ಮೋದಿ ಪಾಕಿಸ್ತಾನದ ಜೊತೆ ಉತ್ತಮ ಸಂಬಂಧ ಬೆಳಸಿಕೊಳ್ಳಲು ಎಲ್ಲ ತಯಾರಿಗಳು ಮಾಡುತ್ತಿದ್ದರೆ, ಪಾಕಿಸ್ತಾನ ಮಾತ್ರ ತನ್ನ ನರಿ ಬುದ್ಧಿ ಬಿಡುತ್ತಿಲ್ಲ. ಸ್ನೇಹ ಮಾತುಕತೆ ಮತ್ತು ಯುದ್ಧ ಎರಡೂ ಒಂದೇ ಸಮಯದಲ್ಲಿ ನಡೆಯದು ಎಂದು ಮೋದಿ ಎಷ್ಟೇ ಹೇಳಿದರೂ ಪಾಕಿಸ್ತಾನಕ್ಕೆ ಇನ್ನೂ ಬುದ್ಧಿ ಬಂದಂತಿಲ್ಲ.

ಇದಕ್ಕೆ ಸಾಕ್ಷಿಯೆಂಬಂತೆ ಪಾಕಿಸ್ತಾನ ತನ್ನ ಗೂಢಚಾರಿ ಐಎಸ್‍ಐ ಏಜೆಂಟರನ್ನು ಭಾರತಕ್ಕೆ ಕಳುಹಿಸಿ, ವಿಶಾಖಪಟ್ಟಣದಲ್ಲಿರುವ ನೌಕಾ ನೆಲೆ `ವರ್ಷ ಯೋಜನೆ'ಯ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಲು ಆದೇಶಿಸಿದೆ. ಇದರಂತೆ ಇಬ್ಬರು ಐಎಸ್‍ಐ ಏಜೆಂಟರು ವಿಶಾಖಪಟ್ಟಣಕ್ಕೆ ಬಂದು ಪ್ರಮುಖ ಮಾಹಿತಿಗಳನ್ನೂ ಕದ್ದು, ಪಾಕಿಸ್ತಾನಕ್ಕೆ ರವಾನಿಸಿದ್ದಾರೆ. ಈ ಬಗ್ಗೆ ರಾಷ್ಟ್ರೀಯ ತನಿಖಾ ದಳವು ಮಾರ್ಚ್ 6ರಂದು ಕೋರ್ಟ್‍ಗೆ ಸಲ್ಲಿಸಿರುವ ಆರೋಪ ಪಟ್ಟಿ ಮೂಲಕ ಪಾಕಿಸ್ತಾನದ ಹೇಯ ಕೃತ್ಯ ಬಯಲಾಗಿದೆ.

ಬಂದದ್ದು ಹೇಗೆ?
ಭಾರತದಲ್ಲಿ ಅದಾಗಲೇ ನೆಲೆಯೂರಿದ್ದ ಐಎಸ್‍ಐ ಏಜೆಂಟ್ ತಮೀಮ್ ಅನ್ಸಾರಿ, ಸಾಕ್ಷ್ಯಚಿತ್ರ ನಿರ್ದೇಶಕನಂತೆ ನಟಿಸಿ ನೌಕಾದಳ ಮತ್ತು ಭೂಸೇನೆಯ ಯೋಧರು ಮತ್ತು ಉನ್ನತ ಮಟ್ಟದ ಅಧಿಕಾರಿಗಳ ಸ್ನೇಹ ಸಂಪಾದಿಸಿಕೊಂಡಿದ್ದ. ಅದರಂತೆ ಐಎಸ್‍ಐ ಏಜೆಂಟರು ತಯಾರಿಸುವ ನಕಲಿ ಸಾಕ್ಷ್ಯ ಚಿತ್ರಕ್ಕೆ `ಪವರ್ ಆಫ್ ಇಂಡಿಯಾ' ಎಂಬ ಹೆಸರನ್ನೂ ಇಡಲಾಗಿತ್ತು. ಅನ್ಸಾರಿ ನಕಲಿ ಸಾಕ್ಷ್ಯಚಿತ್ರಕ್ಕೆ ಸಹಾಯಕರ ನೆಪದಲ್ಲಿ ವಿಶಾಖಪಟ್ಟಣಕ್ಕೆ ಅಮಿರ್ ಜುಬೇರ್ ಸಿದ್ದಿಕಿ ಮತ್ತು ವಿನೀತ್ ಅಲಿಯಾಸ್ ರಾಣಾ ಎಂಬ ಇಬ್ಬರು ಹೊಸ ಐಎಸ್‍ಐ ಏಜೆಂಟರು
ಬಂದಿಳಿದಿದ್ದರು.

ನಿಯೋಜಿಸಿದ್ದು ಯಾರು?
ಮೊದಲನೇ ಗೂಢಚಾರಿ ಅಮಿರ್ ಸಿದ್ದಿಕಿ- ಯನ್ನು ಪಾಕಿಸ್ತಾನದ ಹೈಕಮಿಷನ್ ಸ್ವತಃ ನಿಯೋಜಿಸಿ ಮೊದಲಿಗೆ ಶ್ರೀಲಂಕಾ-ಭಾರತ ಗಡಿ ಭಾಗಕ್ಕೆ ಕಳುಹಿಸಿತ್ತು. ಇನ್ನೊಬ್ಬ ಗೂಢಚಾರಿ ವಿನೀತ್ ಅಲಿಯಾಸ್ ರಾಣಾನನ್ನು ಪಾಕಿಸ್ತಾನದ ಗುಪ್ತಚರ ಅಧಿಕಾರಿಯಾಗಿಯೂ ನೇಮಿಸಿ ಶ್ರೀಲಂಕಾದಲ್ಲಿ ಬಿಡಲಾಗಿತ್ತು.

ಪಾಕಿಸ್ತಾನದ ಆದೇಶವೇನು?
ಅಮೀರ್ ಸಿದ್ದಿಕಿಗೆ ಬಂದ ಆದೇಶದ ಪ್ರಕಾರ, ಆತ ಅನ್ಸಾರಿಗೆ ವಿಶಾಖಪಟ್ಟಣದ ನೌಕಾನೆಲೆ ಆಸುಪಾಸಿನಲ್ಲೇ ಮನೆಮಾಡಿ ನಿತ್ಯವೂ ನೌಕಾನೆಲೆಯ ಅಧಿಕಾರಿಗಳ ಬಳಿ ಸ್ನೇಹದಿಂದ ಮಾತನಾಡಿಸಿ `ವರ್ಷ ಯೋಜನೆ'ಯ ಸ್ಪಷ್ಟ ಚಿತ್ರಣವನ್ನು ಸಂಪಾದಿಸಲು ಆದೇಶಿಸಿದ್ದ. ಇನ್ನೊಬ್ಬ ಏಜೆಂಟ್ ವಿನೀತ್ ಅಲಿಯಾಸ್ ರಾಣಾಗೆ `ವರ್ಷ ಯೋಜನೆ' ಪ್ರಸ್ತುತ ಯಾವ ಹಂತದಲ್ಲಿದೆ? ಯಾವ ಆಯಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಭಾರತದ ಭೂಸೇನೆ ಮತ್ತು ವಾಯು ಸೇನೆಯ ಗೌಪ್ಯ ಮಾಹಿತಿಯನ್ನು ಕಲೆಹಾಕುವ ಮಹತ್ತರವಾದ ಕಾರ್ಯವನ್ನು ನಿರ್ವಹಿಸಲು ಆಮಿರ್ ಸಿದ್ದಿಕಿ, ಪಾಕಿಸ್ತಾನದ ಆದೇಶದ ಮೇರೆಗೆ ನಿಯೋಜಿಸಲ್ಪಟ್ಟಿದ್ದ.

ಎಲ್ಲ ಮಾಹಿತಿ ಪಾಕಿಸ್ತಾನಕ್ಕೆ
ಅನ್ಸಾರಿ ಮತ್ತು ಇನ್ನೊಬ್ಬ ಸ್ಥಳೀಯ ಗೂಢಚಾರಿ ಅರುಣ್ ಸೆಲ್ವರಾಜನ್ ಇಬ್ಬರೂ, ಭಾರತದ ಪ್ಯಾರಾ ರೆಜಿಮೆಂಟ್‍ನಲ್ಲಿ ಮತ್ತು ಸೇನೆಯ ಪ್ರತಿಷ್ಠಿತ ಎಎಸ್‍ಸಿ ನಿವೃತ್ತ ಉನ್ನತ ಅಧಿಕಾರಿಯ ಜತೆ ಸ್ನೇಹ ಸಂಪಾದಿಸಿದ್ದರು. ಇವನಿಂದ ನೌಕಾನೆಲೆ, ಭೂಸೇನೆ, ವಾಯುಸೇನೆ ಗೌಪ್ಯಸ್ಥಳ ಮತ್ತು ಬೆಳವಣಿಗೆಗಳ ಮಾಹಿತಿಯು ಫೋಟೋಗಳ ಸಮೇತ ಪಾಕಿಸ್ತಾನಕ್ಕೆ ಸೇರುತ್ತಿತ್ತು. ಅರುಣ್ ಸೆಲ್ವರಾಜನ್‍ನ ಇ-ಮೇಲ್‍ಗಳನ್ನು ಪರಿಶೀಲಿಸಿದಾಗ ಈ ಅಂಶ ಬೆಳಕಿಗೆ ಬಂದಿದೆ.

ಪಾಕಿಸ್ತಾನ ಯಾವ ಮಟ್ಟಿಗೆ ಮಾಹಿತಿ ಕಲೆಹಾಕುತ್ತಿತ್ತೆಂದರೆ, ನಿರ್ಮಾಣ ಹಂತದಲ್ಲಿರುವ ಯುದ್ಧ ಟ್ಯಾಂಕರ್ಗಳ ಫೋಟೊ, 2020ರಲ್ಲಿ ಭಾರತದ ಸೇನೆಗೆ ಪರಿಚಯಿಸಲಿರುವ ಸುಮಾರು 1,000 ಯುದ್ಧ ಟ್ಯಾಂಕರ್‍ಗಳು ಮತ್ತು ಅದರ ತಯಾರಕರ ಮಾಹಿತಿಯೂ ಪಾಕಿಸ್ತಾನದ ಬಳಿ ಇದೆ.

ಏನಿದು ಯೋಜನೆ?
ವರ್ಷ, ಭಾರತದ ಗೌಪ್ಯ ಯೋಜನೆಗಳಲ್ಲಿ ಒಂದು. ಹಾಗಾಗಿ ವಿಶ್ವವೇ ಇದರ ಮೇಲೆ ಕಣ್ಣಿಟ್ಟಿದೆ. ಇಲ್ಲಿ ಭಾರತೀಯ ನೌಕಾದಳದ ನ್ಯೂಕ್ಲಿಯರ್ ಸಬ್‍ಮರೀನ್ಗಳು ಮತ್ತು ಹಡಗುಗಳ ಮನೆಯಾಗಲಿದೆ. ವಿಶಾಖಪಟ್ಟಣದ 200ಕಿಮಿ ವ್ಯಾಪ್ತಿಯಲ್ಲಿ ಇದು ನಿರ್ಮಾಣವಾಗುತ್ತಿದೆ. ಬಾಬಾ ಅಟೋಮಿಕ್ ರಿಸರ್ಚ್ ಸಂಟರ್ ಸಹ ಇದೇ ನೌಕಾ ನೆಲೆಯಲ್ಲಿದ್ದು ಆಧುನಿಕ ಅಣು ತಂತ್ರಜ್ಞಾನದ ಬಗ್ಗೆ ಸಂಶೋಧನೆ ನಡೆಸಲಿದೆ. 8-12 ಹೊಸ ಅರಿಹಂತ್ ನ್ಯೂಕ್ಲಿಯರ್ ಸಬ್‍ಮರೀನ್ ಗಳ ತಯಾರಿಕೆ.

ಮಾಹಿತಿ ಸಂಗ್ರಹ ಹೇಗೆ?
ಭಾರತದ ಶಕ್ತಿಯ ಬಗ್ಗೆ ಸಾಕ್ಷ್ಯಚಿತ್ರ ಮಾಡುವುದಾಗಿ ಹೇಳಿ ಮಾಹಿತಿ ಪಡೆಯುತ್ತಿದ್ದರು. ಮೊದಲನೆಯ ವಿಧಾನ ಸಾಧ್ಯವಾಗದಿದ್ದಾಗ ಯೋಧರೊಂದಿಗೆ ಸ್ನೇಹ ಸಂಪಾದಿಸಿ ಹೆಚ್ಚಿನ ಮಾಹಿತಿ ಕದಿಯುತ್ತಿದ್ದರು. ಇಬ್ಬರಲ್ಲಿ ಒಬ್ಬ ಐಎಸ್‍ಐ ಏಜೆಂಟ್, ನಿತ್ಯವೂ ಯೋಧರು ಯಾವ ಬಾರ್, ಹೋಟೆಲ್ಲಿಗೆ ಹೋಗುತ್ತಾರೆ ಎಂಬುದನ್ನು ಗಮನಿಸಿ, ಅಲ್ಲಿಗೆ ಏಜೆಂಟನೂ ಶ್ರೀಮಂತನ ವೇಷದಲ್ಲಿ ಹೋಗಿ ಯೋಧರಿಗೆ ಹುಡುಗಿ ಹಾಗೂ ಹಣವನ್ನು ಶ್ರೀಲಂಕಾದ ಕೊಲಂಬೋದಲ್ಲಿ ಸರಬರಾಜು ಮಾಡುವುದಾಗಿ ಆಮಿಷವೊಡ್ಡಿ ಕರೆದೊಯ್ಯುತ್ತಾರೆ. ಅಲ್ಲಿ ಮಾಹಿತಿ ಭಾರತೀಯ ಸೇನೆಯ ಬಗ್ಗೆ ಮತ್ತು ಮುಂದಿನ ಯೋಜನೆಗಳನ್ನು ಸಂಗ್ರಹಿಸಿ ಪಾಕಿಸ್ತಾನಕ್ಕೆ ಇ-ಮೇಲ್ ಮೂಲಕ ರವಾನಿಸುತ್ತಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com