ಇಸ್ರೋಗೆ ಹೊಸ ಹರ್ಷ

`ಇಂದಿರಾಗಾಂಧಿ ಶಾಂತಿ ಪ್ರಶಸ್ತಿ' ಘೋಷಣೆಯಾದ ಮಾರನೇ ದಿನವೇ ಇಸ್ರೋಗೆ ಮತ್ತೊಂದು ಸಿಹಿ. ಅಮೆರಿಕದ ಜಿಪಿಎಸ್‍ಗೆ ಪರ್ಯಾಯವಾಗಿ ಇಸ್ರೋ ಐಆರ್‍ಎನ್‍ಎಸ್ ಎಸ್-1ಡಿ ಉಪಗ್ರಹವನ್ನು ಶನಿವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ...
ಇಸ್ರೋ
ಇಸ್ರೋ
Updated on: 

ಚೆನ್ನೈ: `ಇಂದಿರಾಗಾಂಧಿ ಶಾಂತಿ ಪ್ರಶಸ್ತಿ' ಘೋಷಣೆಯಾದ ಮಾರನೇ ದಿನವೇ ಇಸ್ರೋಗೆ ಮತ್ತೊಂದು ಸಿಹಿ. ಅಮೆರಿಕದ ಜಿಪಿಎಸ್‍ಗೆ ಪರ್ಯಾಯವಾಗಿ ಇಸ್ರೋ ಐಆರ್‍ಎನ್‍ಎಸ್ ಎಸ್-1ಡಿ ಉಪಗ್ರಹವನ್ನು ಶನಿವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಆಂಧ್ರದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸಂಜೆ ಸರಿಯಾಗಿ 5.19ಕ್ಕೆ ನಭಕ್ಕೆ ಚಿಮ್ಮಿದ ಬಾಹ್ಯಾಕಾಶ ನೌಕೆ ಪಿಎಸ್‍ಎಲ್‍ವಿ-ಸಿ27 ಸ್ವಲ್ಪ ಹೊತ್ತಲ್ಲೇ 1,425 ಕೆಜಿ ತೂಕದ ಐಆರ್‍ಎನ್‍ಎಸ್‍ಎಸ್-1ಡಿ(ಇಂಡಿಯನ್ ರೀಜನಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಂ) ಉಪಗ್ರಹವನ್ನು ಕಕ್ಷೆಗೆ ಸೇರಿಸಿತು.

ಇಸ್ರೋ ಉಡಾವಣೆ ಮಾಡಲುದ್ದೇಶಿಸಿರುವ 7 ಉಪಗ್ರಹಗಳ ಸರಣಿಯಲ್ಲಿ ಇದು ನಾಲ್ಕನೆಯದು. ಈ ಉಪಗ್ರಹಗಳ ಮೂಲಕ ಐಆರ್‍ಎನ್‍ಎಸ್‍ಎಸ್ ವ್ಯವಸ್ಥೆಯ ಕಾರ್ಯನಿರ್ವಹಣೆ ಆರಂಭಿಸುವುದು ಇಸ್ರೋ ಉದ್ದೇಶ. ಹಿಂದಿನ ಮೂರು ಉಡಾವಣೆಯ ಮಾದರಿಯಲ್ಲೇ ಇಸ್ರೋ ಈ ಬಾರಿಯೂ ಪಿಎಸ್‍ಎಲ್‍ವಿಯ `ಎಕ್ಸ್‍ಎಲ್' ಆವೃತ್ತಿಯನ್ನು ಬಳಸಿತು. ಚಂದ್ರಯಾನ 1, ಜಿಸ್ಯಾಟ್ 12, ರಿಸ್ಯಾಟ್ 1, ಐಆರ್‍ಎನ್ನೆಸ್ಸೆಸ್-1ಎ, ಮಾರ್ಸ್ ಆರ್ಬಿಟರ್ ಸ್ಪೇಸ್‍ಕ್ರಾಫ್ಟ್, ಐಆರೆನ್ನೆಸ್ಸೆಸ್-1ಬಿ ಮತ್ತು ಐಆರೆನ್ನೆಸ್ಸೆಸ್-1ಸಿ ಯಲ್ಲೂ ಇದೇ ಆವೃತ್ತಿಯನ್ನು ಬಳಸಲಾಗಿತ್ತು.

2 ಪೇಲೋಡ್‍ಗಳು: ಐಆರೆನ್ನೆಸ್ಸೆಸ್ 1ಡಿ ಎರಡು ಪೇಲೋಡ್‍ಗಳನ್ನು ಹೊಂದಿದೆ. ಮೊದಲನೆಯದ್ದು ನೇವಿಗೇಷನ್, ಎರಡನೆಯದ್ದು ರೇಂಜಿಂಗ್ ಪೇಲೋಡ್. ಇಲ್ಲಿ ನೇವಿಗೇಷನ್ ಪೇಲೋಡ್ ಬಳಕೆದಾರರಿಗೆ ದಿಶಾದರ್ಶನ ಸೇವೆಯ ಸಿಗ್ನಲ್‍ಗಳನ್ನು ರವಾನಿಸುತ್ತದೆ. ರೇಜಿಂಗ್ ಪೇಲೋಡ್ ಉಪಗ್ರಹದ ಸ್ಪಷ್ಟ ವ್ಯಾಪ್ತಿಯನ್ನು ಕಂಡುಹಿಡಿಯುತ್ತದೆ. ಒಟ್ಟಾರೆ ಈ ಹೊಸ ಉಪಗ್ರಹವು ಭೂಮಿಯಲ್ಲಿರುವ ವ್ಯಕ್ತಿಗೆ ತಾನಿರುವ ಭೌಗೋಳಿಕ ಪ್ರದೇಶವನ್ನು ಪತ್ತೆಹಚ್ಚಲು ನೆರವಾಗುತ್ತದೆ ಎಂದಿದ್ದಾರೆ ಇಸ್ರೋ ಅಧ್ಯಕ್ಷ ಎ.ಎಸ್.ಕಿರಣ್‍ಕುಮಾರ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com