

ತಿರುವನಂತಪುರಂ: ಕೇರಳ ಮೂಲದ ಮಾವೋವಾದಿ ದಂಪತಿಗಳಾದ ರೂಪೇಶ್ ಮತ್ತು ಪಿ.ಎ ಶೈನಾ ಸೇರಿದಂತೆ ಮೂವರು ಶಂಕಿತ ಮಾವೋವಾದಿಗಳನ್ನು ಆಂಧ್ರ ಪ್ರದೇಶ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ರೂಪೇಶ್ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಮ್ಯೂನಿಸ್ಟ್ ಪಾರ್ಟಿ ಆಪ್ ಇಂಡಿಯಾ (ವಾವೋವಾದಿ)ಯ ಸಂಚಾಲಕರಾಗಿದ್ದಾನೆ. ಈತ ಪತ್ನಿ ಶೈನಾ ಕೂಡಾ ಇದೇ ಸಂಘಟನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ದಂಪತಿಗಳ ವಿರುದ್ಧ ಕೇರಳದಲ್ಲಿ 30 ಕೇಸುಗಳಿವೆ. ಇವರನ್ನು ನಿನ್ನೆ ಕೊಯಂಬತ್ತೂರಿನಲ್ಲಿ ಬಂಧಿಸಲಾಗಿತ್ತು.
ರೂಪೇಶ್ -ಶೈನಾ ದಂಪತಿಗಳ ಬಂಧನವನ್ನು ದೃಢಪಡಿಸಿದ ಕೇರಳ ಗೃಹ ಸಚಿವ ರಮೇಶ್ ಚೆನ್ನಿತ್ತಲ, ಕೇರಳದಲ್ಲಿ ಮಾವೋಗಳ ವಿರುದ್ಧ ಕಠಿಣ ಕ್ರಮ ಕೈಗೊಂಡ ಕಾರಣ ಈ ದಂಪತಿಗಳು ತಮಿಳ್ನಾಡಿಗೆ ಪರಾರಿಯಾಗಿದ್ದರು. ವಿವಿಧ ರಾಜ್ಯಗಳ ಪೊಲೀಸರು ಒಟ್ಟಿಗೆ ಸೇರಿ ಕಾರ್ಯ ನಿರ್ವಹಿಸಿದ ಕಾರಣ ಈ ದಂಪತಿಗಳನ್ನು ಬಂಧಿಸುವುದು ಸಾಧ್ಯವಾಯಿತು ಎಂದು ಚೆನ್ನಿತ್ತಲ ಹೇಳಿದ್ದಾರೆ.
ಈ ದಂಪತಿಗಳ ಬಂಧನಕ್ಕಾಗಿ ಆಂಧ್ರಪ್ರದೇಶ, ತಮಿಳ್ನಾಡು, ಕೇರಳ, ಕರ್ನಾಟಕ ಮತ್ತು ತೆಲಂಗಾಣದ ಗುಪ್ತಚರ ಇಲಾಖೆಗಳು ಜಂಟಿಯಾಗಿ ಕಾರ್ಯ ನಿರ್ವಹಿಸಿದ್ದವು.