

ಮಥುರಾ: ಮೇ 25 ರಂದು ಉತ್ತರ ಪ್ರದೇಶದಲ್ಲಿ ನಡೆಯುವ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಲ್ಲುವುದಾಗಿ ಬೆದರಿಕೆ ಸಂದೇಶ ಪೊಲೀಸರಿಗೆ ಬಂದಿದೆ. ಹೀಗಾಗಿ ನಾಳೆ ನಡೆಯುವ ಬಿಜೆಪಿ ವರ್ಷದ ಸಾಧನಾ ಸಮಾವೇಶಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಮಥುರಾ ಎಸ್ ಎಸ್ ಪಿ ರಾಕೇಶ್ ಸಿಂಗ್ ಸೇರಿದಂತೆ ಮಾಧ್ಯಮದವರಿಗೂ ಈ ಬೆದರಿಕೆ ಸಂದೇಶ ರವಾನಿಸಿದ್ದು ರ್ಯಾಲಿ ನಡೆಯುವ ಪ್ರದೇಶಗಳಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ವಾಟ್ಸ್ ಆಪ್ ನಲ್ಲಿ ಬಂದಿರುವ ಸಂದೇಶ ಆಧರಿಸಿ ಪೊಲೀಸರು ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ. ಮಥುರಾದ ನವ್ಲಿ ಗ್ರಾಮದ ರಾಮ್ ವೀರ್ ಎಂಬಾತ ಈ ಮೆಸೇಜ್ ಕಳುಹಿಸಿರುವುದಾಗಿ ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ. ಈತ ಪರಾರಿಯಾಗಿದ್ದು ರಾಮ್ ವೀರ್ ನ ಅಣ್ಣ ಲಕ್ಷ್ಮಣ್ ಸಿಂಗ್ ನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ರಾಮ್ ವೀರ್ ನಕಲಿ ವಿಳಾಸ ನೀಡಿ ಸಿಮ್ ಖರೀದಿಸಿದ್ದು, ಹಲವರಿಗೆ ಈ ರೀತಿಯ ಬೆದರಿಕೆ ಸಂದೇಶ ಕಳುಹಿಸಿರುವುದು ತಿಳಿದು ಬಂದಿದೆ. ರಾಮ್ ವೀರ್ ವಿರುದ್ಧ ದೂರು ದಾಖಲಿಸಿರುವ ಪೋಲೀಸರು ಆತನಿಗಾಗಿ ಶೋಧ ನಡೆಸಿದ್ದಾರೆ.