

ಬಾಲಾಪುರ(ಮಹಾರಾಷ್ಟ್ರ): ಶಿರಡಿ-ಮೈಸೂರು ಎಕ್ಸ್ಪ್ರೆಸ್ ರೈಲಿನಲ್ಲಿ ಮಂಗಳವಾರ ತಡರಾತ್ರಿ 30 ರಿಂದ 50 ಮಂದಿಯ ದರೋಡೆಕೋರರ ಗುಂಪು ನಾಲ್ಕು ಬೋಗಿಗಳಿಗೆ ನುಗ್ಗಿ ಭಾರಿ ದರೋಡೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಶಿರಡಿಯಿಂದ ಮೈಸೂರಿಗೆ ವಾಪಸ್ ಆಗುತ್ತಿದ್ದ ರೈಲಿಗೆ ಮಂಗಳವಾರ ರಾತ್ರಿ ನುಗ್ಗಿದ 30ರಿಂದ 50ಕ್ಕೂ ಹೆಚ್ಚು ದರೋಡೆಕೋರರು ಮಾರಕಾಸ್ತ್ರಗಳಿಂದ ಪ್ರಯಾಣಿಕರನ್ನು ಬೆದರಿಸಿ, ಎಸ್1-ಎಸ್14 ಬೋಗಿಗಳ ನೂರಾರು ಪ್ರಯಾಣಿಕರಿಂದ ಲಕ್ಷಾಂತರ ರುಪಾಯಿ ಹಣ , ಚಿನ್ನಾಭರಣಗಳನ್ನು ದೋಚಿಸಿದ್ದಾರೆ. ಇನ್ನು ಈ ರೈಲಿನಲ್ಲಿದ್ದ ಹೆಚ್ಚಿನ ಪ್ರಯಾಣಿಕರ ಪೈಕಿ ಕರ್ನಾಟಕದ ಪ್ರಯಾಣಿಕರೇ ಹೆಚ್ಚಾಗಿದ್ದರು ಎಂದು ತಿಳಿದುಬಂದಿದೆ. ಎಲ್ಲರೂ ಶಿರಡಿ ಯಾತ್ರೆ ಮುಗಿಸಿ ಕರ್ನಾಟಕಕ್ಕೆ ವಾಪಸಾಗುತ್ತಿದ್ದರು ಎಂದು ತಿಳಿದುಬಂದಿದೆ.
ಈ ಸಂಬಂಧ ಮಹಾರಾಷ್ಟ್ರದ ಬಾಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಶಿರಡಿಯಿಂದ ಮೈಸೂರಿಗೆ ವಾಪಸಾಗುತ್ತಿದ್ದ ರೈಲು ಮಹಾರಾಷ್ಟ್ರದ ಬಾಲಾಪುರ ಬಳಿ ವೇಗವನ್ನು ಕಡಿತಗೊಳಿಸಿಕೊಂಡಿದೆ. ಇದೇ ಸಮಯವನ್ನು ಕಾಯುತ್ತಿದ್ದ ದರೋಡೆಕೋರರ ಗುಂಪು ತಡರಾತ್ರಿ ರೈಲಿನ ಎಸ್1ನಿಂದ ಎಸ್14 ನಡುವಿನ ಬೋಗಿಗಳಿಗೆ ಪ್ರಯಾಣಿಕರನ್ನು ಬೆದರಿಸಿ ಚಿನ್ನಾಭರಣ ಮತ್ತು ನಗದು ದೋಚಿದ್ದಾರೆ.
ರೈಲು ಬಾಲಾಪುರ ನಿಲ್ದಾಣಕ್ಕೆ ತಲುಪಿದ ನಂತರ ಪ್ರಯಾಣಿಕರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 5 ಗಂಟೆಗಳ ಕಾಲ ರೈಲನ್ನು ನಿಲ್ಲಿಸಿ ಪೊಲೀಸರು ಪ್ರಯಾಣಿಕರಿಂದ ಮಾಹಿತಿ ಸಂಗ್ರಹ ಮಾಡಿ ದೂರು ಸ್ವೀಕರಿಸಿದ್ದಾರೆ. ಮಾರಕಾಸ್ತ್ರಗಳನ್ನು ತೋರಿಸಿ ಪ್ರಯಾಣಿಕರನ್ನು ದೋಚಿದ ಗುಂಪು ಬಾಲಾಪುರ ನಿಲ್ದಾಣದ ಸಮೀಪವೇ ಚೈನ್ ಎಳೆದು ರೈಲನ್ನು ನಿಲ್ಲಿಸಿ ಪರಾರಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.