

ನವದೆಹಲಿ: ಅಸ್ಸಾಂನಲ್ಲಿ ಅಪಹರಣ, ಕೊಲೆ ಮತ್ತು ಇತರ ಗುರುತರ ಪ್ರಕರಣಗಳಲ್ಲಿ ಭಾರತೀಯ ತನಿಖಾ ಸಂಸ್ಥೆಗಳಿಗೆ ಬೇಕಾಗಿರುವ ನಿಷೇಧಿತ ಉಲ್ಫಾ ಸಂಘಟನೆಯ ಸಂಸ್ಥಾಪಕ ಕಾರ್ಯದರ್ಶಿ ಅನೂಪ್ ಚೇಟಿಯಾ ಅಲಿಯಾಸ್ ಗೋಲಾಪ್ ಬರುವಾನನ್ನು ಬಾಂಗ್ಲಾದೇಶ, ಭಾರತಕ್ಕೆ ಹಸ್ತಾಂತರ ಮಾಡಿದೆ. ಈತನಿಗಾಗಿ ಬರೋಬ್ಬರಿ 2 ದಶಕ ಶೋಧ ಕಾರ್ಯ ನಡೆಸಲಾಗಿತ್ತು. ಈ ಬಗ್ಗೆ ಖುದ್ದು ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ ಜತೆ ಮಾತುಕತೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ಢಾಕಾದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ ಎಸ್‍ಎ)ಅಜಿತ್ ದೊವಲ್ ಸಮ್ಮುಖದಲ್ಲಿ ಚೇಟಿಯಾನನ್ನು ಹಸ್ತಾಂತರಿಸಲಾಗಿದೆ. 1991ರಲ್ಲಿ ಅಸ್ಸಾಂನ ಆಗಿನ ಸಿಎಂ ಹಿತೇಶ್ವರ್ ಸೈಕಿಯಾ ಆತನ ಬಿಡುಗಡೆ ಮಾಡಿದ್ದರು.