

ಚೆನ್ನೈ: ವಾಯಭಾರ ಕುಸಿತದಿಂದಾಗಿ ತಮಿಳುನಾಡಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಮಳೆ ಸಂಬಂಧಿತ ಅವಘಡಗಳಲ್ಲಿ ಇದುವರೆಗೂ 55 ಮಂದಿ ಬಲಿಯಾಗಿದ್ದಾರೆ.
ಈಶಾನ್ಯ ಮಾರುತದ ಪರಿಣಾಮವಾಗಿ ಅಬ್ಬರದ ಮಳೆ ಮುಂದುವರೆದಿದ್ದು, ರೈಲು, ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಮಳೆ ಸಂಬಂಧಿತ ಘಟನೆಗಳಲ್ಲಿ ನಿನ್ನೆ ರಾತ್ರಿಯಿಂದ 7 ಮಂದಿ ಸಾವನ್ನಪ್ಪಿದ್ದಾರೆ.
ಕಡಲೂರು ಜಿಲ್ಲೆಯಲ್ಲಿ ಸಂಭವಿಸಿದ 27 ಸಾವು ಸೇರಿದಂತೆ ಮಳೆ ಸಂಬಂಧಿತ ಘಟನೆಗಳಲ್ಲಿ 48 ಮಂದಿ ಮೃತ ಪಟ್ಟಿರುವುದಾಗಿ ಸರ್ಕಾರ ತಿಳಿಸಿದೆ. ಇನ್ನೂ ಆನೇಕ ಪ್ರದೇಶಗಳಲ್ಲಿ ಭಾರೀ ಗಾಳಿಗೆ ಮರಗಳು ಬಿದ್ದು ಕಾರು ಸೇರಿದಂತೆ ಹಲವು ವಾಹನಗಳು ಜಖಂಗೊಂಡಿರುವ ವರದಿಯಾಗಿದೆ.
ತಮಿಳುನಾಡಿನಲ್ಲಿ ಇನ್ನು ಒಂದು ವಾರ ಮಳೆ ಮುಂದುವರಿಯಲಿದ್ದು, ಕರ್ನಾಟಕದಲ್ಲೂ ಸಹ ಮುಂದಿನ ಎರಡು ದಿನಗಳಲ್ಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸೈಂಟ್ ಥಾಮಸ್ ಮೌಂಟ್ ಮತ್ತು ವೆಲಾಚರ್ರಿ ಸೇರಿದಂತೆ ದಕ್ಷಿಣ ಚೆನ್ನೈಯ ಹಲವಾರು ಭಾಗಗಳಲ್ಲಿ ಭಾರಿ ಮಳೆಯ ಪರಿಣಾಮವಾಗಿ ಕೆಳ ಸೇತುವೆಗಳ ಸಹಿತವಾಗಿ ಹಲವಾರು ಪ್ರದೇಶಗಳು ನೀರಿನಡಿ ಮುಳುಗಿವೆ. ಚೆನ್ನೈ, ವೆಲ್ಲೂರು, ತಿರುವಳ್ಳೂರು, ಕಾಂಚೀಪುರಂ ಸಹಿತವಾಗಿ ಹಲೆವಡೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ