

ನವದೆಹಲಿ: ಬಿತ್ತನೆ ಬೀಜಕ್ಕಾಗಿ ಪರದಾಡುತ್ತಿದ್ದ ರೈತರಿಗೆ ಉಚಿತವಾಗಿ ಬೀಜ ಹಂಚಿ ದೇಶಾದ್ಯಂತ ಕಿಸಾನ್ ಬಾಬಾ ಎಂದು ಖ್ಯಾತಿಗಳಿಸಿದ್ದ ರೈತನೊಬ್ಬ ಇದೀಗ ಕೋಮಾದಲ್ಲಿರುವ ತನ್ನ ಪತ್ನಿಯನ್ನು ಉಳಿಸಿಕೊಳ್ಳಲು ಹಣವಿಲ್ಲದೆ ಪರದಾಡುತ್ತಿರುವ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
ಪ್ರಕಾಶ್ ಸಿಂಗ್ ರಘುವಂಶಿ ಬಹುಶಃ ಈ ಹೆಸರು ಪರಿಚಿತವಿಲ್ಲದಿದ್ದರೂ ಕಿಸಾನ್ ಬಾಬಾ ಎಂಬ ಹೆಸರು ಮಾತ್ರ ಎಲ್ಲರಿಗೂ ನೆನಪಿರುತ್ತದೆ. ಏಕೆಂದರೆ 2007ರಲ್ಲಿ ದೇಶದಲ್ಲಿ ಬಿತ್ತನೆ ಬೀಜದ ಹಾಹಾಕಾರವೆದ್ದಾಗ ಇಡೀ ದೇಶಾದ್ಯಂತ ಸಂಚರಿಸಿ ರೈತರಿಗೆ ಉಚಿತ ಬಿತ್ತನೆ ಬೀಜ ನೀಡಿದ್ದ ರೈತನೇ ಈ ಪ್ರಕಾಶ್ ಸಿಂಗ್ ರಘುವಂಶಿ. ಇದೇ ಕಾರಣಕ್ಕಾಗಿ ಇವರನ್ನು ಕಿಸಾನ್ ಬಾಬಾ ಎಂದೂ ಕರೆಯುತ್ತಾರೆ. ಇವರ ಈ ಕಾರ್ಯದಿಂದಾಗಿ ದೇಶದ ಸುಮಾರು 1 ಲಕ್ಷ ರೈತರು ಲಾಭ ಪಡೆದುಕೊಂಡಿದ್ದು, ಇಂದಿಗೂ ಇವರ ಕೃಷಿ ಭೂಮಿಯನ್ನು ಬೀಜೋತ್ಪಾದನೆ ಮತ್ತು ಅದರ ಸಂಶೋಧನೆಗೆ ಬಳಕೆ ಮಾಡಲಾಗುತ್ತಿದೆ.
2007ರಲ್ಲಿ ಬ್ಯಾಂಕಿನಿಂದ ಸಾಲ ಪಡೆದು ಪ್ರಕಾಶ್ ಸಿಂಗ್ ಕಾರು ಖರೀದಿಸಿದ್ದರು. ರೈತರಿಗೆ ಉಚಿತವಾಗಿ ಬೀಜ ಹಂಚಲು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದ ಪ್ರಕಾಶ್ ಸಿಂಗ್ ಅವರು, ಕಿಸಾನ್ ರಥ ಯಾತ್ರಾ ಎಂಬ ಹೆಸರಿನಲ್ಲಿ ಇದೇ ಕಾರಿನಲ್ಲಿ ದೇಶಾದ್ಯಂತ ಸಂಚರಿಸಿ ರೈತರಿಗೆ ಬಿತ್ತನೆ ಬೀಜವನ್ನು ಹಂಚಿಕೆ ಮಾಡಿದ್ದರು. ಆ ಮೂಲಕ ರೈತರ ಪಾಲಿಗೆ ಕಿಸಾನ್ ಬಾಬಾ ಆಗಿದ್ದರು.
ತಮ್ಮ ಅಭೂತಪೂರ್ವ ಕಾರ್ಯದಿಂದಾಗಿ ಕಿಸಾನ್ ಬಾಬಾ 2009ರಲ್ಲಿ ಅಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ರಿಂದ ರಾಷ್ಟ್ರೀಯ ಕೃಷಿ ಆವಿಷ್ಕಾರ ಪ್ರಶಸ್ತಿಗೂ ಭಾಜನರಾಗಿದ್ದರು.
ಇದೀಗ ಇಂತಹ ಕಿಸಾನ್ ಬಾಬಾ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದು, ತಮ್ಮ ಅನಾರೋಗ್ಯ ಪೀಡಿತ ಪತ್ನಿಯನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಪ್ರಕಾಶ್ ಸಿಂಗ್ ರಘುವಂಶಿ ಅವರ ಪತ್ನಿ ಶಕುಂತಲಾ ಅವರು ಅನಾರೋಗ್ಯ ಪೀಡಿತರಾಗಿ ಕೋಮಾದಲ್ಲಿದ್ದು, ಅವರಿಗೆ ಚಿಕಿತ್ಸೆ ಕೊಡಿಸಲು ಪರದಾಡುತ್ತಿದ್ದಾರೆ. ಪ್ರಕಾಶ್ ಸಿಂಗ್ ಮೂಲತಃ ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರ ವಾರಣಾಸಿಯ ತಾಂಡಿಯಾ ಗ್ರಾಮದವರಾಗಿದ್ದು, ಈ ಹಿಂದೆ ಅನಾರೋಗ್ಯಕ್ಕೆ ಈಡಾಗಿದ್ದ ತಮ್ಮ ಪತ್ನಿಯನ್ನು ಸಮೀಪದ ಬನಾರಸ್ ನಲ್ಲಿರುವ ಎಸ್ ಎಸ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಈ ವೇಳೆ ವೈದ್ಯರು ನೀಡಿದ್ದ ಚುಚ್ಚುಮದ್ದಿನ ಪ್ರಮಾಣ ಹೆಚ್ಚಾಗಿ ಪತ್ನಿ ಶಕುಂತಲಾ ಕೋಮಾಗೆ ಹೋಗಿದ್ದರು.
ಬಳಿಕ ಅವರನ್ನು ಅಕ್ಟೋಬರ್ 28ರಂದು ನವದೆಹಲಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವರೆಗೂ ಚಿಕಿತ್ಸೆಗಾಗಿ ಸುಮಾರು 4 ಲಕ್ಷ ರು.ಗಳು ಖರ್ಚಾಗಿದ್ದು, ಶಕುಂತಲಾ ಅವರ ಆರೋಗ್ಯದಲ್ಲಿ ಮಾತ್ರ ಯಾವುದೇ ಚೇತರಿಕೆ ಕಂಡುಬಂದಿಲ್ಲ. ಆದರೆ ಪ್ರತಿ ನಿತ್ಯ ಚಿಕಿತ್ಸೆಗಾಗಿ ಸುಮಾರು 40 ರಿಂದ 50 ಸಾವಿರ ರು.ಖರ್ಚಾಗುತ್ತಿದ್ದು. ಅಷ್ಟು ಹಣವನ್ನು ವ್ಯಯಿಸಲು ಪ್ರಕಾಶ್ ಸಿಂಗ್ ಶಕ್ತರಾಗಿಲ್ಲ. ಚಂಡೀಗಢದ ಎಂಜಿನಿಯರಿಂಗ್ ಕಾಲೇಜಿನ ಕೆಲ ವಿದ್ಯಾರ್ಥಿಗಳು ಪ್ರಕಾಶ್ ಸಿಂಗ್ ಅವರಿಗೆ ಧನ ಸಹಾಯ ಮಾಡುತ್ತಿದ್ದಾರೆ. ಆದರೂ ಆ ಹಣ ಪ್ರಾಥಮಿಕ ಚಿಕಿತ್ಸೆಗೇ ಸಾಲುತ್ತಿಲ್ಲ. ಹೀಗಾಗಿ ಪ್ರಕಾಶ್ ಸಿಂಗ್ ಪ್ರಧಾನಿ ನರೇಂದ್ರ ಮೋದಿ ಅವರ ಸಹಾಯ ಯಾಚನೆ ಮಾಡುತ್ತಿದ್ದು, ನೆರವು ದೊರೆಯುವ ವಿಶ್ವಾಸದಲ್ಲಿದ್ದಾರೆ. ಇದೇ ಕಾರಣಕ್ಕಾಗಿ ಅವರು ನವದೆಹಲಿ ಖಾಸಗಿ ಆಸ್ಪತ್ರೆ ತಮ್ಮ ಪತ್ನಿಯನ್ನು ದಾಖಲು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ಪ್ರಸ್ತುತ ನರೇಂದ್ರ ಮೋದಿ ಅವರು ಬ್ರಿಟನ್ ಪ್ರವಾಸದಲ್ಲಿರುವುದರಿಂದ ಆಸ್ಪತ್ರೆಯ ವೆಚ್ಚ ಭರಿಸಲಾಗದೇ ಪ್ರಕಾಶ್ ಸಿಂಗ್ ತಮ್ಮ ಪತ್ನಿಯನ್ನು ಮನೆಗೆ ಕರೆದೊಯ್ಯಲು ನಿರ್ಧರಿಸಿದ್ದಾರೆ. ಅಂತೆಯೇ ಪ್ರಸ್ತುತ ಬೀಜೋತ್ಪಾದನೆ ಮತ್ತು ಸಂಶೋಧನೆಗೆ ಬಳಕೆಯಾಗುತ್ತಿರುವ ಅವರ 3.5 ಎಕರೆ ಕೃಷಿ ಭೂಮಿಯನ್ನು ಸಹ ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಒಟ್ಟಾರೆ ಒಂದು ಕಾಲದಲ್ಲಿ ಸಂಕಷ್ಟದಲ್ಲಿದ್ದ ದೇಶದ ರೈತರಿಗೆ ನೆರವಾಗಿದ್ದ ಖ್ಯಾತ ರೈತ ಇದೀಗ ಸಂಕಷ್ಟಕ್ಕೆ ಸಿಲುಕಿದ್ದು, ತನ್ನ ಪತ್ನಿಯನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾನೆ.