

ನವದೆಹಲಿ: ತಮ್ಮ ವಿವಾದಾತ್ಮಕ ಹೇಳಿಕೆಯಿಂದ ಅನೇಕ ಸಂದರ್ಭಗಳಲ್ಲಿ ಪಕ್ಷಕ್ಕೆ ಮುಜುಗರವನ್ನುಂಟುಮಾಡಿದ್ದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್, ಇದೀಗ ಮತ್ತೊಂದು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಪ್ಯಾರಿಸ್ ಮೇಲೆ ಉಗ್ರರ ದಾಳಿ ಕುರಿತಾಗಿ ಉತ್ತರ ಪ್ರದೇಶ ಸಚಿವ ಸಮಾಜವಾದಿ ಮುಖಂಡ ಅಜಂ ಖಾನ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಾಕ್ಷಿ ಮಹಾರಾಜ್, ಅಜಂ ಖಾನ್ ಒಬ್ಬ ಭಯೋತ್ಪಾದಕ, ಅದು ಟಿಪ್ಪು ಸುಲ್ತಾನ್ ಬಗ್ಗೆ ಯಾಗಿರಲಿ, ಅಥವಾ ಪ್ಯಾರಿಸ್ ಮೇಲಿನ ದಾಳಿಯಾಗಿರಲಿ, ಅಜಂ ಖಾನ್ ಅವರು ಭಯೋತ್ಪಾದಕರಿಗೆ ಬೆಂಬಲ ನೀಡುವ ರೀತಿಯ ಹೇಳಿಕೆಗಳನ್ನು ಕೊಡುತ್ತಾರೆ. ಅವರ ಮಾತಿನಲ್ಲಿ ಅವರು ಉಗ್ರರನ್ನು ಬೆಂಬಲಿಸುತ್ತಿದ್ದಾರೆ ಎಂಬ ಭಾವನೆ ಬರುವಂತಿರುತ್ತದೆ ಎಂದು ಹೇಳಿದ್ದಾರೆ.
ಅಜಂ ಖಾನ್ ಅವರು ಪ್ಯಾರಿಸ್ ಮೇಲೆ ಐಸಿಸ್ ನಡೆಸಿದ ದಾಳಿ ಬಗ್ಗೆ ನಿನ್ನೆ ಪ್ರತಿಕ್ರಿಯೆ ನೀಡಿ, ಪ್ಯಾರಿಸ್ ಮೇಲಿನ ಉಗ್ರರ ದಾಳಿ ಖಂಡನೀಯ. ಆದರೆ ವಿಶ್ವದ ಪ್ರಮುಖ ರಾಷ್ಟ್ರಗಳಾದ ಅಮೆರಿಕ ಮತ್ತು ರಷ್ಯಾ ದೇಶಗಳು ಅರಬ್ ದೇಶಗಳ ಮೇಲೆ ನಡೆಸುತ್ತಿರುವ ದಾಳಿ ಮತ್ತು ಇದರಿಂದ ಅಲ್ಲಿನ ಅಮಾಯಕರ ಹತ್ಯೆಯಾಗುತ್ತಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ಪ್ರತಿಕ್ರಿಯೆಯಾಗಿ ಐಸಿಸ್ ಉಗ್ರರು ಹೀಗೆ ಮಾಡಿರಬಹುದು ಎಂದು ಹೇಳಿದ್ದರು.
ಅಸಹಿಷ್ಣುತೆ ಕುರಿತಾಗಿ ದೇಶಾದ್ಯಂತ ಚರ್ಚೆ ಮುಂದುವರಿದಿರುವ ಬಗ್ಗೆ ಪ್ರತಿಕ್ರಿಯಿಸಿದ ಸಾಕ್ಷಿ ಮಹಾರಾಜ್, ವಿಶ್ವದಲ್ಲೇ ಭಾರತದಷ್ಟು ಸಹಿಷ್ಣು ದೇಶ ಬೇರೊಂದಿಲ್ಲ ಎಂದು ಹೇಳಿದರು.
ಸಂಸತ್ತಿನಲ್ಲಿ ಜೆಡಿಯು ಪ್ರತಿಭಟನೆ: ಸಾಕ್ಷಿ ಮಹಾರಾಜ್ ಅವರ ಹೇಳಿಕೆಯನ್ನು ಹೇಳಿಕೆಯನ್ನು ಪ್ರತಿಭಟಿಸಿ ಸಂಯುಕ್ತ ಜನತಾದಳ ಸಂಸತ್ತಿನ ಚಳಿಗಾಲ ಅಧಿವೇಶನದ ವೇಳೆ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ಭಯೋತ್ಪಾದನೆ ವಿರುದ್ಧ ಎಲ್ಲಾ ರಾಜಕೀಯ ನಾಯಕರು ಪಕ್ಷಭೇದ ಮರೆತು ಹೋರಾಟ ನಡೆಸಬೇಕಾದ ಸಮಯವಿದು. ಇಂತಹ ಸಂದರ್ಭದಲ್ಲಿ ನಾಯಕರು ಇಂತಹ ಪ್ರಚೋದನಾತ್ಮಕ ಹೇಳಿಕೆ ನೀಡಬಾರದು. ಸಾಕ್ಷಿ ಮಹಾರಾಜ್ ರಂಥವರು ಸಂಸತ್ತನ್ನು ಮತ್ತು ಇಡೀ ದೇಶದ ರಾಜಕೀಯವನ್ನು ಹಾಳು ಮಾಡುವಂಥವರು. ಮಹಾರಾಜ್ ಅವರ ಹೇಳಿಕೆಯಿಂದ ವೈಯಕ್ತಿಕವಾಗಿ ಅವರಿಗೆ ಮತ್ತು ಪಕ್ಷಕ್ಕೂ ಹಾನಿಯಾಗಲಿದೆ. ನಾವು ಅವರ ವಿರುದ್ಧ ಕಲಾಪದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಸಂಯುಕ್ತ ಜನತಾದಳ ನಾಯಕ ಕೆ.ಸಿ.ತ್ಯಾಗಿ ತಿಳಿಸಿದ್ದಾರೆ.
ಆರೋಪ ತಿರಸ್ಕರಿಸಿದ ಅಜಂ ಖಾನ್: ತಮ್ಮ ವಿರುದ್ಧದ ಆರೋಪ ಮಾಧ್ಯಮಗಳ ಸೃಷ್ಟಿ. ಅರಬ್ ರಾಷ್ಟ್ರಗಳ ಮೇಲೆ ವಿಶ್ವದ ಮಹಾನ್ ರಾಷ್ಟ್ರಗಳು ನಡೆಸುತ್ತಿರುವ ದಾಳಿಗೆ ಪ್ರತೀಕಾರವಾಗಿ ಐಸಿಸ್ ಪ್ಯಾರಿಸ್ ಮೇಲೆ ದಾಳಿ ನಡೆಸಿದೆ ಎಂದು ತಾವು ಹೇಳಿಲ್ಲ ಎಂದಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕೂಡ ಅಜಂ ಖಾನ್ ಬೆಂಬಲಕ್ಕೆ ನಿಂತಿದ್ದಾರೆ. ಆದರೆ ಪ್ರತಿಪಕ್ಷದ ನಾಯಕರು ಅಜಂ ಖಾನ್ ಹೇಳಿಕೆಯನ್ನು ಖಂಡಿಸಿ ಅವರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಪ್ರತಿಭಟನೆ ನಡೆಸುತ್ತಿದ್ದಾರೆ.