

ನವದೆಹಲಿ: ಭಾರತೀಯ ಸಂವಿಧಾನದ ಮೂಲ ತತ್ವಗಳು ಅಪಾಯದಲ್ಲಿವೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ಸಂಸತ್ತಿನ ಚಳಿಗಾಲ ಅಧಿವೇಶನ ಕಲಾಪದ ಆರಂಭದ ದಿನವಾದ ಇಂದು ಲೋಕಸಭೆಯಲ್ಲಿ ಮಾತನಾಡಿದ ಅವರು, ನಮ್ಮ ದೇಶಕ್ಕೆ ಸಂವಿಧಾನಕ್ಕಾಗಿ ಕಾಂಗ್ರೆಸ್ ಹೋರಾಟ ನಡೆಸಿತ್ತು. ಆದರೆ ಇಂದು ಸಂವಿಧಾನ ಅಪಾಯದಲ್ಲಿದೆ. ಕಳೆದ ಕೆಲವು ತಿಂಗಳಿನಿಂದ ಸಂವಿಧಾನದ ಆಶಯ ಮತ್ತು ತತ್ವಗಳಿಗೆ ವಿರುದ್ಧವಾದ ವಾತಾವರಣ ಕಂಡುಬರುತ್ತಿದೆ. ಸಂವಿಧಾನವನ್ನು ರಕ್ಷಿಸುವ ಮಾತುಗಳನ್ನು ತೋರಿಕೆಗೆ ಆಡುತ್ತಾರೆ. ಆದರೆ ಆ ಕೆಲಸ ನಿಜವಾಗಿಯೂ ಆಗುತ್ತಿಲ್ಲ ಎಂದು ಆರೋಪಿಸಿದರು.
ನಮ್ಮ ಸಂವಿಧಾನ ಜಾತ್ಯತೀತತೆಯನ್ನು ಎತ್ತಿಹಿಡಿಯುತ್ತದೆ ಎಂಬ ಮಾತನ್ನು ಅಲ್ಲಗಳೆಯಬಾರದು. ಈ ದೇಶದ ಬಡವರಿಗೂ ಮಾತನಾಡುವ ಹಕ್ಕನ್ನು ಸಂವಿಧಾನ ಕೊಡುತ್ತದೆ. ವಿವಿಧತೆಯಲ್ಲಿ ಏಕತೆಯನ್ನು ಅದು ಸಾರುತ್ತದೆ. ಆದರೆ ಅವುಗಳಿಗೆ ವಿರುದ್ಧವಾದ ಕೆಲಸಗಳು ನಮ್ಮ ದೇಶದಲ್ಲಿ ಇಂದು ನಡೆಯುತ್ತಿವೆ ಎಂದು ದೂರಿದರು.
ಇಂದು ಸಂವಿಧಾನ ದಿನದ ಅಂಗವಾಗಿ ಅವರು ಲೋಕಸಭೆಯಲ್ಲಿ ಅದಕ್ಕೇ ಒತ್ತು ನೀಡಿ ಮಾತನಾಡಿದರು. ಸಂವಿಧಾನದ ರಚನೆ, ಸಂವಿಧಾನದ ಆಶಯಗಳು, ಡಾ.ಬಿ.ಆರ್.ಅಂಬೇಡ್ಕರ್ ಮೊದಲಾದವುಗಳನ್ನು ಸದನಕ್ಕೆ ವಿವರಿಸಿದರು.
ಅವರ ಮಾತಿನ ಹೈಲೈಟ್ ಗಳು:
1. 26, ನವೆಂಬರ್ 1949ರಲ್ಲಿ ಸಂವಿಧಾನವನ್ನು ಆಯ್ದುಕೊಳ್ಳಲಾಯಿತು. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಡಾ.ರಾಜೇಂದ್ರ ಪ್ರಸಾದ್ ಅವರು ಶ್ಲಾಘಿಸಿದರು. ಅಂಬೇಡ್ಕರ್ ಅವರನ್ನು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.
2. ಸಂವಿಧಾನದ ಪ್ರತಿಯೊಂದು ಕಾಯ್ದೆ ಬಗ್ಗೆ ಸಮಗ್ರ ಮಾಹಿತಿ ನೀಡಲು ಸಂವಿಧಾನದ ಕರಡು ಸಮಿತಿಯನ್ನು ರಚಿಸಲಾಯಿತು. ಅದು ಕಾಂಗ್ರೆಸ್ ನ ಸಂಪ್ರದಾಯವಾಗಿತ್ತು.
3. ಸಂವಿಧಾನದ ಇತಿಹಾಸ ತುಂಬಾ ಹಳೆಯದಾದ್ದು. ಸ್ವಾತಂತ್ರ್ಯ ಹೋರಾಟ ಕಾಲಕ್ಕೆ ಸೇರಿದ್ದಾಗಿದೆ. ಹಾಗಾಗಿ ಕಾಂಗ್ರೆಸ್ ಮತ್ತು ಸಂವಿಧಾನ ರಚನೆಗೆ ಅಂತರ್ ಸಂಬಂಧೀಯವಾಗಿವೆ.
4. 1931ರ ಕರಾಚಿ ಸಭೆಯಲ್ಲಿ, ಮೂಲಭೂತ ಹಕ್ಕು ಮತ್ತು ಆರ್ಥಿಕ ಹಕ್ಕುಗಳನ್ನು ಪ್ರಸ್ತಾವನೆಯಲ್ಲಿ ನಮೂದಿಸಲಾಗಿತ್ತು. ಸಂವಿಧಾನ ಅಧಿವೇಶನಕ್ಕೆ ನೆಹರೂ, ಪಟೇಲ್, ರಾಜೇಂದ್ರ ಪ್ರಸಾದ್, ಮೌಲಾನಾ ಆಜಾದ್ ಮೊದಲಾದವರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
5. ಸಂವಿಧಾನದಲ್ಲಿ ದೇಶದ ಕಡು ಬಡವರಿಗೂ ಸಮಾನ ಅವಕಾಶ ಕಲ್ಪಿಸಲಾಗಿದೆ. ಆದರೆ ಅದರ ಸರಿಯಾದ ಜಾರಿಯಾಗುತ್ತಿಲ್ಲ.