

ಗ್ರೇಟರ್ ನೊಯ್ಡಾ: ''ಆ ಸಂದರ್ಭದಲ್ಲಿ ನಾನು ಮನೆಯಲ್ಲಿರುತ್ತಿದ್ದರೆ ನನ್ನನ್ನೂ ಕೂಡ ಕೊಂದು ಹಾಕುತ್ತಿದ್ದರು'', ಇದು ಅಕ್ಲಾಕ್ ನ ಸಹೋದರನ ಪ್ರತಿಕ್ರಿಯೆ.
ಉತ್ತರ ಪ್ರದೇಶ ರಾಜ್ಯದ ದಾದ್ರಿ ಎಂಬಲ್ಲಿ ಗೋಮಾಂಸ ಸೇವಿಸಿದ ಆರೋಪದಲ್ಲಿ ಮೊಹಮ್ಮದ್ ಅಕ್ಲಾಖ್ ಎಂಬ ಮುಸಲ್ಮಾನರೊಬ್ಬರನ್ನು ಕೊಂದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಲಖ್ ನ ಸಹೋದರ 60 ವರ್ಷದ ಜಮೀಲ್ ಅಹ್ಮದ್ ಕಳೆದ ಸೋಮವಾರ ರಾತ್ರಿ ನಡೆದ ಘಟನೆಯನ್ನು ವಿವರಿಸಿದ್ದಾರೆ.
ಘಟನೆ ನಡೆದ ದಿನ ನಾನು ಗಜಿಯಾಬಾದ್ ನ ಲೋನಿಯಲ್ಲಿದ್ದೆ. ಆ ದಿನ ರಾತ್ರಿ ನಾನು ಅಕ್ಲಾಕ್ ನ ಪುತ್ರಿಯಿಂದ ದೂರವಾಣಿ ಕರೆ ಬಂತು. ಸುಮಾರು 200 ಜನರಿದ್ದ ಗುಂಪು ನನ್ನ ತಂದೆಯನ್ನು ಮನೆಯಿಂದ ಹೊರಗೆ ಎಳೆದುಕೊಂಡು ಹೋಗಿ ಕ್ರೂರವಾಗಿ ಕೊಂದು ಹಾಕಿದರು ಎಂದು ಹೇಳಿದಳು. ಆಗ ಅಕ್ಲಾಕ್ ನಿದ್ದೆ ಮಾಡಲು ಸಿದ್ದತೆ ಮಾಡಿಕೊಂಡಿದ್ದನಂತೆ. ಆತನನ್ನು ಕೊಂದ ನಂತರ ಮನೆಯಿಂದ 300 ಮೀಟರ್ ದೂರದಲ್ಲಿರುವ ದೇವಸ್ಥಾನದ ಮೈಕ್ ನಿಂದ ಒಂದು ಘೋಷಣೆ ಕೇಳಿಬಂತು. ಆದರೆ ಇವರ ಬಗ್ಗೆ ಹೇಳಿದ್ದು ಎಂಬುದು ಗೊತ್ತಾಗಲಿಲ್ಲವಂತೆ ಎಂದು ಅಕ್ಲಾಕ್ ನ ಮಗಳು ವಿವರಿಸಿದಳು ಎಂದು ಜಮೀಲ್ ಅಹ್ಮದ್ ಹೇಳುತ್ತಾರೆ.
ಅಂದು ನಾನು ಕೂಡ ಮನೆಯಲ್ಲಿರುತ್ತಿದ್ದರೆ ನನ್ನನ್ನು ಸಹ ಬಿಡುತ್ತಿರಲಿಲ್ಲ. ಅಕ್ಲಕ್ ನ ಸಾವು ಮತ್ತು ಅವನ ಮಗನಿಗೆ ಆದ ಗಾಯದ ಸುದ್ದಿಯನ್ನು ಕೇಳಿದ ಕೂಡಲೇ ನೊಯ್ಡಾದ ಕೈಲಾಶ್ ಆಸ್ಪತ್ರೆಗೆ ತೆರಳಿದೆ. ಅಲ್ಲಿನ ದೃಶ್ಯ ನೋಡಿ ನಿಜಕ್ಕೂ ಗಾಬರಿಪಟ್ಟೆ. ನನ್ನ ಸೋದರನನ್ನು ರಕ್ಷಿಸುವವರು ಯಾರೂ ಇರಲಿಲ್ಲ. ಅವನ ಸಾವು ಆಕಸ್ಮಿಕ ಎಂದು ವೈದ್ಯರು ಹೇಳಿದರು.
ನನ್ನ ಸೋದರನ ಸಾವಿಗೆ ಪ್ರತೀಕಾರ ಬಯಸುತ್ತಿಲ್ಲ, ಆದರೆ ನ್ಯಾಯ ಕೇಳುತ್ತಿದ್ದೇನಷ್ಟೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಜಮೀಲ್ ಹೇಳುತ್ತಾರೆ.
ಅಕ್ಲಕ್ ಮತ್ತು ನಾನು ಬಹಳ ಆತ್ಮೀಯರಾಗಿದ್ದೆವು. ಅವನು ನನಗಿಂತ 10 ವರ್ಷ ಚಿಕ್ಕವನಾದ್ದರಿಂದ ನಾನು ಅವನಿಗೆ ರಕ್ಷಕನಂತೆ. ದುಷ್ಕರ್ಮಿಗಳಿಗೆ ಶಾಸ್ತಿಯಾಗಬೇಕು. ಇಂತಹ ಘಟನೆ ಮತ್ತೆ ಮರುಕಳಿಸಬಾರದು. ಈ ಪ್ರಕರಣದಲ್ಲಿ ನಾವು ಮುಗ್ಧರು. ತಪ್ಪು ಮಾಡದವರಿಗೆ ಈ ಸ್ಥಿತಿ ಬರಬಾರದು ಎಂಬುದೇ ನನ್ನ ಆಸೆ. ಬಿಸಾಡ ಗ್ರಾಮದ ಜನರು ಒಳ್ಳೆಯವರು.ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆಯಾಗುವುದು ಬೇಡ. ನನ್ನ ತಮ್ಮ ಸಾವನ್ನಪ್ಪಿದ, ಅವನ ಪುತ್ರ ಬೇಗನೆ ಗುಣಮುಖನಾಗಲಿ ಎಂಬುದೇ ನನ್ನ ಆಸೆ ಎಂದು ಹೇಳಿದ್ದಾರೆ.
ಕೋಮುವಾದಿ ಬಣ್ಣ ಹಚ್ಚಲಾಗುತ್ತಿದೆ: ಈ ಮಧ್ಯೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಘಟನೆಗೆ ಕೋಮುವಾದಿ ಬಣ್ಣ ಹಚ್ಚುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಅಪರಾಧಿಗಳನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ನೀಡುವ ಬದಲು ಅಕ್ಲಾಕ್ ಮನೆಯಲ್ಲಿದ್ದ ಗೋಮಾಂಸವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ. ಇದರ ಅರ್ಥವೇನು ಎಂದು ಪ್ರಶ್ನಿಸಿದೆ.
ಅಖಿಲೇಶ್ ಯಾದವ್ ಸರ್ಕಾರ ಸರಿಯಾಗಿ ಆಡಳಿತ ನಡೆಸುತ್ತಿಲ್ಲ. ಜನರಿಗೆ ರಕ್ಷಣೆ ಇಲ್ಲದಂತಾಗಿದೆ.ಘಟನೆ ಬಗ್ಗೆ ಮಾತನಾಡಿರುವ ಗೃಹ ಸಚಿವ ರಾಜನಾಥ್ ಸಿಂಗ್, ಈ ಘಟನೆ ತೀರಾ ದುರದೃಷ್ಟಕರ. ಇದಕ್ಕೆ ಕೋಮುವಾದಿ ಬಣ್ಣ ಹಚ್ಚುವುದು ಬೇಡ.