
ಹೈದರಾಬಾದ್: ಭೀಕರ ರಸ್ತೆ ಅಪಘಾತವೊಂದರಲ್ಲಿ 15 ಮಂದಿ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ತೆಲಂಗಾಣದ ಭುವನಗಿರಿ ಯಿಂದ ನಲ್ಗೊಂಡಾ ಜಿಲ್ಲೆಗೆ ಆಗಮಿಸುತ್ತಿದ್ದ ಆರ್ ಟಿಸಿ ಬಸ್ ರಾಮನ್ನಪೇಟ ಇಂದ್ರಪಾಲ ನಗರದ ಬಳಿ ಬರುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಲಾರಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ 15 ಮಂದಿ ಸಾವನ್ನಪ್ಪಿ, 20ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಬಸ್ ಪಲ್ಟಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕೂಡಲೇ ಸ್ಥಳೀಯರು ಬಸ್ ನಲ್ಲಿದ್ದ ಪ್ರಯಾಣಿಕರನ್ನು ಬಸ್ ನಿಂದ ಹೊರತರಲು ಪ್ರಯತ್ನಿಸಿದ್ದಾರೆ. ಅಲ್ಲದೆ 108 ಆಂಬುಲೆನ್ಸ್ ಗೆ ಮತ್ತು ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿ ಎಲ್ಲ ಪ್ರಯಾಣಿಕರನ್ನು ಹೊರತಂದು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಘಟನೆ ವಿವರ
ತೆಲಂಗಾಣದ ನಾರ್ಕೆಟ್ ಪೆಟೆ ಡಿಪೋಗೆ ಸೇರಿದ ಎಪಿ ಝಡ್ 2270 ಸಂಖ್ಯೆಯ ಆರ್ ಟಿಸಿ ಬಸ್ ಭುವನಗಿರಿಯಿಂದ ನಲ್ಗೊಂಡ ಜಿಲ್ಲೆಗೆ ಪ್ರಯಾಣ ಬೆಳೆಸಿತ್ತು. ಬಸ್ ನಲ್ಲಿ ಸುಮಾರು 45 ಮಂದಿ ಪ್ರಯಾಣಿಕರು ಇದ್ದರು. ಬಸ್ ರಾಮನ್ನಪೇಟೆ ತಾಲ್ಲೂಕಿನ ಇಂದ್ರಪಾಲ ನಗರ ಸಮೀಪಕ್ಕೆ ಬರುತ್ತಿದ್ದಂತೆಯೇ ಪುಸ್ತಕಗಳನ್ನು ತುಂಬಿಕೊಂಡಿದ್ದ ಸರಕು ಸಾಗಣೆ ಲಾರಿಯೊಂದು ವೇಗವಾಗಿ ಬಂದು ಬಸ್ ಗೆ ನೇರ ಮುಖಾಮುಖಿ ಡಿಕ್ಕಿ ಹೊಡೆದಿದೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಬಸ್ ಪಲ್ಟಿ ಹೊಡೆದಿದ್ದು, ಬಸ್ ನಲ್ಲಿದ್ದ ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರಕೆ. ಅಲ್ಲದೆ ಸ್ಥಳದಲ್ಲಿಯೇ 15 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ.
Advertisement