

ನವದೆಹಲಿ: ``ವೈಯಕ್ತಿಕ ಕಾನೂನಿಗೆ ಸಂಬಂಧಿಸಿ ಸಾಕಷ್ಟು ಗೊಂದಲಗಳಿವೆ. ಒಂದು ವೇಳೆ ನೀವು ಸಮಾನ ನಾಗರಿಕ ಸಂಹಿತೆಯ ಪರವಾಗಿದ್ದರೆ ಅದನ್ನು ಜಾರಿಗೆ ತರಲು ಕ್ರಮ ಕೈಗೊಳ್ಳಿ'' ಹೀಗೆಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡದ್ದು ಸುಪ್ರೀಂ ಕೋರ್ಟ್.
ಸಮಾನ ನಾಗರಿಕ ಸಂಹಿತೆ ಅನುಷ್ಠಾನ ಆಗಬೇಕಿದೆ. ಸಂಹಿತೆ ಜಾರಿಗೆ ತರುವ ಪ್ರಕ್ರಿಯೆಗೆ ಏನಾಗಿದೆ? ಸರ್ಕಾರಕ್ಕೆ ಈ ಕುರಿತು ಆಸಕ್ತಿ ಇದೆಯೇ? ಹಾಗಿದ್ದರೆ ಜಾರಿ ಕೆಲಸ ಮಾಡಿ ಎಂದು ಹೇಳಿದೆ. ಕ್ರಿಶ್ಚಿಯನ್ ಸಮುದಾಯದಲ್ಲಿ ಸಮ್ಮತಿ ಯಿಂದ ವಿಚ್ಛೇದನ ಪಡೆಯಲು 2 ವರ್ಷಗಳ ಕಾಲಾವಧಿ ಇದೆ. ಉಳಿದ ಧರ್ಮಗಳಲ್ಲಿ ಈ ಅವಧಿ ಒಂದು ವರ್ಷಕ್ಕೆ ಸೀಮಿತ. ಇದು ಹಿಂಸೆ ಮಾತ್ರವಲ್ಲದೆ ತಾರತಮ್ಯಕ್ಕೆ ಕಾರಣ ವಾಗುತ್ತದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಕೇಂದ್ರಕ್ಕೆ ಈ ರೀತಿಯ ನಿರ್ದೇಶನ ನೀಡಿದೆ ಎಂದು ಹಿಂದುಸ್ತಾನ್ ಟೈಮ್ಸ್ ಮಂಗಳವಾರ ವರದಿ ಮಾಡಿದೆ.
ಜತೆಗೆ ಕ್ರಿಶ್ಚಿಯನ್ ವಿವಾಹ ವಿಚ್ಛೇದನ ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ 3 ವಾರ ಗಳಲ್ಲಿ ಪ್ರಸ್ತಾವನೆ ಸಲ್ಲಿಸಬೇಕೆಂದು ಸುಪ್ರೀಂ ನ್ಯಾಯಪೀಠ ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್‍ಗೆ ಸೂಚನೆ ನೀಡಿದೆ. ವಿವಿಧ ಧರ್ಮಗಳಲ್ಲಿರುವ ವೈಯಕ್ತಿಕ ಕಾನೂನು ಬಗ್ಗೆ ಇರುವ ಗೊಂದಲ ಪರಿಹರಿಸಬೇಕೆಂದೂ ಸೂಚಿಸಿದೆ. ದೆಹಲಿ ಮೂಲದ ಅಲ್ಬರ್ಟ್ ಆ್ಯಂಟನಿ ಕ್ರಿಶ್ಚಿಯನ್ ವಿವಾಹ ವಿಚ್ಛೇದನ ಕಾಯ್ದೆಯಲ್ಲಿನ ಸೆಕ್ಷನ್ 10 ಎ (1)ರ ಪ್ರಕಾರ ಇರುವ 2 ವರ್ಷಗಳ ಅವಧಿಯನ್ನು ಪ್ರಶ್ನಿಸಿದ್ದರು. ಈ ಬಗ್ಗೆ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಪೀಠ ``ಯಾಕೆ ಈ ರೀತಿಯ ಗೊಂದಲ? ಅರ್ಜಿದಾರರು ತಮ್ಮ ಧರ್ಮದಲ್ಲಿ 2 ವರ್ಷ ಸಮಯ ಇದೆ. ಹಿಂದೂ ಧರ್ಮದಲ್ಲಿ 1 ವರ್ಷಕ್ಕೆ ಸಮಯ ನಿಗದಿಪಡಿಸಲಾಗಿದೆ. ಈ ಗೊಂದಲ ನಿವಾರಣೆಗೆ ಕ್ರಮ ಕೈಗೊಳ್ಳಿ ಎಂದಿತು.
ಕೇರಳ, ಕರ್ನಾಟಕ ಹೈಕೋರ್ಟ್ ಗಳು ಕಾಯ್ದೆಯಲ್ಲಿನ ಈ ಅಂಶವನ್ನು ಸಂವಿಧಾನ ಬಾಹಿರ ಎಂದು ಘೋಷಿಸಿವೆ. ದೇಶದ ಉಳಿದ ಭಾಗದಲ್ಲಿನ ಸಮುದಾಯ ದವರಿಗೆ ಅದರ ಲಾಭ ಸಿಗುತ್ತಿಲ್ಲ ಎಂದು ಆ್ಯಂಟನಿ ವಾದಿಸಿದ್ದಾರೆ.