

ನವದೆಹಲಿ: ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಸರಕಾರವು ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುವುದು ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಉದ್ಧವ್ ಠಾಕ್ರೆ ಅವರು ಅ.22ರಂದು ಫಡ್ನವೀಸ್ ನೇತೃತ್ವದ ಬಿಜೆಪಿ ಸರಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂಪಡೆಯುತ್ತಾರೆ ಎಂಬ ವದಂತಿಯನ್ನು ತಳ್ಳಿಹಾಕಿದ ಫಡ್ನವೀಸ್, ತಮ್ಮ ಸರಕಾರ ಶಿವಸೇನೆಯಜೊತೆ 5 ವರ್ಷಗಳನ್ನು ಪೂರ್ಣಗೊಳಿಸುವುದು ಖಚಿತವೆಂದು ಹೇಳಿದರು.
"ಮಹಾರಾಷ್ಟ್ರ ಸರಕಾರದಲ್ಲಿ ಬಿಜೆಪಿ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯು ಬೇರ್ಪಡುವಂತಹ ಯಾವುದೇ ಪರಿಸ್ಥಿತಿ ಇಲ್ಲ. ಈ ಬಗ್ಗೆ ನನಗೆ ಶೇ.ನೂರು ವಿಶ್ವಾಸವಿದೆ. ನಮ್ಮ ಸರಕಾರವು ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುವುದೆಂಬ ವಿಶ್ವಾಸವೂ ನನಗಿದೆ' ಎಂದು ಫಡ್ನವೀಸ್ ಭರವಸೆ ವ್ಯಕ್ತ ಪಡಿಸಿದರು.
ಪಾಕಿಸ್ತಾನ ಗಾಯಕ ಗುಲಾಂ ಅಲಿ ಅವರ ಮುಂಬಯಿಯಲ್ಲಿನ ಸಂಗೀತ ಕಾರ್ಯಕ್ರಮವನ್ನು ರದ್ದು ಪಡಿಸುವಲ್ಲಿ ಶಿವಸೇನೆ ಯಶಸ್ವಿಯಾಗಿತ್ತಲ್ಲದೇ ಆ ಬಳಿಕ ಪಾಕ್ ಮಾಜಿ ವಿದೇಶ ಸಚಿವ ಮಹಮೂದ್ ಕಸೂರಿ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಓಆರ್‌ಎಫ್ ಸುಧೀಂದ್ರ ಕುಲಕರ್ಣಿ ಅವರ ಮುಖಕ್ಕೆ ಕಪ್ಪು ಮಸಿ ಬಳಿದಿತ್ತು. ಈ ಎರಡು ಕಾರಣಗಳಿಂದಾಗಿ ತೀವ್ರ ಮುಜುಗರಕ್ಕೊಳಗಾಗಿದ್ದ ಮಹಾರಾಷ್ಟ್ರ ಸರಕಾರದಿಂದ ಶಿವಸೇನೆಯು ಹೊರ ನಡೆಯುವುದೆಂಬ ಊಹಾಪೋಹಗಳು ಗರಿಗೆದರಿದ್ದವು.