

ಚೆನ್ನೈ: ತಮಿಳುನಾಡಿನ 82 ಮೀನುಗಾರರನ್ನು ಅ.28 ಬಿಡುಗಡೆ ಮಾಡುವುದಾಗಿ ಶ್ರೀಲಂಕಾ ಹೇಳಿದೆ.
ಕಳೆದ 2 ತಿಂಗಳಿನಿಂದ ಶ್ರೀಲಂಕಾ ನೌಕಾಪಡೆ 82 ಮೀನುಗಾರರನ್ನು ಬಂಧಿಸಿತ್ತು. 28 ರಂದು ಲಂಕಾ ಸರ್ಕಾರ ಮೀನುಗಾರರನ್ನು ಬಿಡುಗಡೆ ಮಾಡಲಿದೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ. ಸಿಎಂ ಜಯಲಲಿತಾ ಅವರ ನಿರಂತರ ಯತ್ನದಿಂದ ಮೀನುಗಾರರು ಬಿಡುಗಡೆಯಾಗುತ್ತಿದ್ದಾರೆ ಎಂದು ಸರ್ಕಾರದ ಪ್ರಕಟಣೆಯಲ್ಲಿ ಹೇಳಲಾಗಿದೆ.
ನಾಗಪಟ್ಟಿಣಂ, ಪುದುಕೊಟ್ಟೈ, ಟ್ಯುಟಿಕೋರಿನ್ ಹಾಗೂ ರಾಮನಾಥಪುರಂ ಗೆ ಸೇರಿದ ಮೀನುಗಾರರು ಬಿಡುಗಡೆಯಾಗಲಿದ್ದಾರೆ. ಪಾಲ್ಕ್ ಬೇ ಹಾಗೂ ಗಲ್ಫ್ ಆಫ್ ಮನ್ನಾರ್ ನಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಶ್ರೀಲಂಕಾ ನೌಕಾಪಡೆ ಮೀನುಗಾರರನ್ನು ಬಂಧಿಸಿತ್ತು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದ ಜಯಲಲಿತಾ, ಮೀನುಗಾರರ ಬಿಡುಗಡೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರಕ್ಕೆ ಒತ್ತಾಯಿಸಿದ್ದರು.