

ನವದೆಹಲಿ: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವವರು ಪ್ರಾಣಿಗಳು ಎಂದಿರುವ ಸುಪ್ರೀಂ ಕೋರ್ಟ್, ಅವರು ಕ್ಷಮೆಗೆ ಅರ್ಹರಲ್ಲ ಎಂದು ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಹಾಗೂ ನ್ಯಾಯಮೂರ್ತಿ ಅಮಿತವ ರಾಯ್ ಅವರನ್ನೊಳಗೊಂಡ ಸುಪ್ರೀಂ ಪೀಠ, 2010ರಲ್ಲಿ 10 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಕುಲದೀಪ್ ಕುಮಾರ್‌ಗೆ ನೀಡಿದ್ದ 10 ವರ್ಷಗಳ ಜೈಲು ಶಿಕ್ಷೆಯನ್ನು ಇಂದು ಎತ್ತಿ ಹಿಡಿದಿದೆ.
ಈ ವೇಳೆ, 'ಇದೊಂದು ಕ್ಷಮಿಸಲಾರದ ಕೃತ್ಯ. ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವವರು ಪ್ರಾಣಿಗಳು. ನ್ಯಾಯಾಲಗಳು ಅವರ ಬಗ್ಗೆ ಕರುಣೆ ತೋರಬೇಕಾಗಿಲ್ಲ' ಎಂದು ಹೇಳಿದ ಸುಪ್ರೀಂ ಪೀಠ, ಜೈಲು ಶಿಕ್ಷೆಯ ವಿರುದ್ಧದ ಅರ್ಜಿಯನ್ನು ವಜಾಗೊಳಿಸಿದೆ.
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವವರ ಪುರುಷತ್ವ ಹರಣ ಮಾಡಬೇಕೆಂದು ಮದ್ರಾಸ್ ಹೈಕೋರ್ಟ್ ಶಿಫಾರಸು ಮಾಡಿದ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಕಾಮುಕರಿಗೆ ಕಠಿಣ ಸಂದೇಶ ರವಾನಿಸಿದೆ.