
ನವದೆಹಲಿ: ಕೇರಳ ಹೌಸ್ ಕ್ಯಾಂಟೀನಿನಲ್ಲಿ ಬೀಫ್ ಮೆನು ವಿತರಿಸಲಾಗುತ್ತಿದೆ ಎಂಬ ಆರೋಪದ ಮೇಲೆ ದಾಳಿ ಮಾಡಿದ ದೆಹಲಿ ಪೊಲೀಸರ ಕ್ರಮವನ್ನು ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು ವಿರೋಧಿಸಿದ್ದು, ಈ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮಂಗಳವಾರ ಬರೆದಿದ್ದಾರೆಂದು ತಿಳಿದುಬಂದಿದೆ.
ಪತ್ರದಲ್ಲಿ ದೆಹಲಿಯಲ್ಲಿರುವ ಕೇರಳ ಹೌಸ್ ಕ್ಯಾಂಟೀನ್ ನಲ್ಲಿ ಕಾನೂನಿನ ಪ್ರಕಾರವೇ ಎಲ್ಲಾ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆ. ಕಾನೂನಿ ಪ್ರಕಾರದಲ್ಲೇ ಸಸ್ಯಾಹಾರ ಹಾಗೂ ಮಾಂಸಾಹಾರಗಳನ್ನು ನೀಡಲಾಗುತ್ತಿದೆ. ಕ್ಯಾಂಟೀನ್ ಮೆನುವಿನಲ್ಲೂ ಕಾನೂನಿ ರೀತಿಯಲ್ಲೇ ಊಟದ ಎಲ್ಲಾ ಪದಾರ್ಥಗಳನ್ನು ಪಟ್ಟಿಯಾಗಿ ನೀಡಲಾಗಿದೆ. ಪ್ರಕರಣ ಕುರಿತಂತೆ ಕೇಂದ್ರ ಗೃಹ ಸಚಿವರು ಕಠಿಣ ಕ್ರಮ ಕೈಗೊಳ್ಳಬೇಕಿದ್ದು, ಕ್ಯಾಂಟೀನ್ ಮೇಲೆ ದಾಳಿ ಮಾಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಕೇರಳ ಹೌಸ್ ಕ್ಯಾಂಟೀನ್ ನಲ್ಲಿ ಬೀಫ್ ತಿನ್ನಲು ಅನುವುಮಾಡಿಕೊಡಲಾಗಿದೆ ಎಂದು ಹಿಂದು ಸೇನಾ ಸಂಸ್ಥೆಯ ವಿಷ್ಣು ಗುಪ್ತ ಎಂಬ ವ್ಯಕ್ತಿ ನೀಡಿದ್ದ ದೂರಿನ ಮೇರೆಗೆ ಪೊಲೀಸರ ತಂಡ ಸೋಮವಾರ ಸಂಜೆ ಕೇರಳ ಹೌಸ್ ಕ್ಯಾಂಟೀನಿನ ಮೇಲೆ ದಾಳಿ ನಡೆಸಿತ್ತು.
ಈ ದಾಳಿಯನ್ನು ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿಯವರು ಖಂಡಿಸಿದ್ದರು. ಅಲ್ಲದೆ, ದಾಳಿ ನಡೆಯುವ ಮುನ್ನ ಅಧಿಕಾರಿಗಳು ಒಮ್ಮೆ ಯೋಚಿಸಬೇಕಿತ್ತು, ಕೇರಳ ಹೌಸ್ ಎಂಬುದು ರಾಜ್ಯದ ಅತಿಥಿ ಗೃಹವೇನೂ ಅಲ್ಲ. ಈ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ನನಗೆ ಸಿಕ್ಕಿಲ್ಲ. ಆದರೆ, ದೆಹಲಿ ಪೊಲೀಸರು ದಾಳಿ ನಡೆಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿಯಾಗಬೇಕಿತ್ತು. ಘಟನೆ ಕುರಿತಂತೆ ಕೇಂದ್ರ ಸರ್ಕಾರದೊಂದಿಗೆ ಚರ್ಚೆ ನಡೆಸಲು ಚಿಂತನೆ ನಡೆಸಲಾಗುತ್ತದೆ ಎಂದು ಹೇಳಿದ್ದರು.
ಘಟನೆ ಕುರಿತಂತೆ ಹಲವು ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ದೆಹಲಿ ಪೊಲೀಸರು, ದೇಶದಲ್ಲಿ ಇದೀಗ ಗೋಮಾಂಸ ಕುರಿತಂತೆ ಸಾಕಷ್ಟು ವಿಧ್ವಂಸಕ ಕೃತ್ಯಗಳು ನಡೆಯುತ್ತಿವೆ. ಹೀಗಾಗಿ ದೇಶದಲ್ಲಿ ಯಾವುದೇ ಅಹಿತರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ದಾಳಿ ನಡೆಸಲಾಯಿತು. ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ ವ್ಯಕ್ತಿ ಈ ಹಿಂದೆ ನಡೆದ ಪ್ರಕರಣವೊಂದರಲ್ಲಿ ಕಾನೂನು ಕೈಗೆತ್ತಿಕೊಂಡ ವ್ಯಕ್ತಿಯಾಗಿದ್ದನು.ಪ್ರಕರಣ. ಠಾಣೆಗೆ ಕರೆ ಬಂದಾಗ, ದೂರು ಬಂದಾಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದ ನಮ್ಮ ಕರ್ತವ್ಯ ಹಾಗಾಗಿ ನಾವು ನಮ್ಮ ಕರ್ತವ್ಯವನ್ನು ಮಾಡಿದ್ದೇವೆ ಎಂದು ಹೇಳಿದ್ದಾರೆ.
ನಾವು ಕೋಣದ ಮಾಂಸವನ್ನು ಹಲವು ವರ್ಷಗಳಿಂದಲೂ ಮಾರಾಟ ಮಾಡುತ್ತಿದ್ದೇವೆ. ಆದರೆ, ಗೋಮಾಂಸ ಆಹಾರವನ್ನು ಎಂದಿಗೂ ಎಲ್ಲಿಯೂ ಮಾರಾಟ ಮಾಡಿಲ್ಲ ಎಂದು ಕೇರಳ ಮುಖ್ಯ ಕಾರ್ಯದರ್ಶಿ ಜಿಜೀ ಧಾಮ್ಸನ್ ಹೇಳಿದ್ದಾರೆ.
ಪೊಲೀಸರ ಕ್ರಮ ವಿರೋಧಿಸಿ ದೆಹಲಿಯಲ್ಲಿ ಸಂಸದರ ಪ್ರತಿಭಟನೆ
ಕೇರಳ ಹೌಸ್ ಕ್ಯಾಂಟೀನಿನ ಮೇಲೆ ದಾಳಿ ಮಾಡಿದ ದೆಹಲಿ ಪೊಲೀಸರ ಕ್ರಮವನ್ನು ಈಗಾಗಲೇ ಕೇರಳದ ಹಲವು ಸಂಸದರು ದೆಹಲಿಯಲ್ಲಿ ಇದೀಗ ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರದ ವಿರುದ್ಧ ಘೋಷಣಾ ವಾಕ್ಯಗಳನ್ನು ಪ್ರದರ್ಶಿಸುತ್ತಿದೆ.
ಪೊಲೀಸರ ಕ್ರಮ ಸಮರ್ಥಿಸಿಕೊಂಡ ಬಿಜೆಪಿ
ಕೇರಳ ಹೌಸ್ ಕ್ಯಾಂಟೀನ್ ಮೇಲೆ ದೆಹಲಿ ಪೊಲೀಸರು ನಡೆಸಿದ ದಾಳಿಗೆ ಈಗಾಗಲೇ ಕೇರಳದ ಸಂಸದರು ಸೇರಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವಿರೋಧಿಸಿರುವ ಬೆನ್ನಲೇ ಪೊಲೀಸರ ಕ್ರಮವನ್ನು ಬಿಜೆಪಿಯು ಸಮರ್ಥಿಸಿಕೊಂಡಿದ್ದು, ದೂರು ಬರುತ್ತಿದ್ದಂತೆ ಪೊಲೀಸರು ತಮ್ಮ ಕರ್ತವ್ಯವನ್ನು ಪಾಲಿಸಿದ್ದಾರೆ. ತನಿಖೆ ನಡೆಸುವುದು ಪೊಲೀಸರ ಕರ್ತವ್ಯ. ಆ ಕರ್ತವನ್ನು ಅವರು ಮಾಡಿದ್ದಾರೆ. ತನಿಖೆ ವೇಳೆ ಕ್ಯಾಂಟೀನ್ ನ ಮೆನುವಿನಲ್ಲಿ ಕಾನೂನಿನ ರೀತಿಯಲ್ಲಿಯೇ ಆಹಾರ ಪದಾರ್ಥಗಳ ಪಟ್ಟಿಯಿದೆ ಎಂದು ಹೇಳಿದ್ದಾರೆ.
Advertisement