

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಆರ್‌ಎಸ್‌ಎಸ್ ಸಭೆಯಲ್ಲಿ ಆರ್.ಎಸ್.ಎಸ್ ನಾಯಕರನ್ನು ಭೇಟಿ ಮಾಡಿರುವುದರ ಬಗ್ಗೆ ಕಾಂಗ್ರೆಸ್ ಆಕ್ರೋಶಗೊಂಡಿದೆ.
ನವದೆಹಲಿಯಲ್ಲಿ ನಡೆದ ಆರ್‌ಎಸ್‌ಎಸ್-ಬಿಜೆಪಿ ವಾರ್ಷಿಕ ಸಮಸ್ವಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ, ಪ್ರಧಾನಿ ಮೋದಿ, ಆರ್.ಎಸ್.ಎಸ್ ಸಭೆಯಲ್ಲಿ ಪಾಲ್ಗೊಂಡು ಅದರ ನಾಯಕರನ್ನು ಭೇಟಿ ಮಾಡಿರುವುದನ್ನು ಸಂವಿಧಾನಕ್ಕೆ ಉಂಟಾದ ಅವಮಾನ ಎಂದು ಪರಿಗಣಿಸಬೇಕು ಎಂದಿದ್ದಾರೆ.
ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವರು ಆರ್.ಎಸ್. ಎಸ್ ಸಭೆಯಲ್ಲಿ ಭಾಗವಹಿಸಿರುವುದು ಸಂಸದೀಯ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ಪ್ರಧಾನಿ ಹಾಗೂ ಸಚಿವರು ಪ್ರಮಾಮಾಣ ವಚನ ಸ್ವೀಕರಿಸುವಾಗ ಸರ್ಕಾರದ ಯೋಜನೆಗಳು ಮತ್ತು ನೀತಿಗಳನ್ನು ಸಂವಿಧಾನಾತ್ಮಕ ಹುದ್ದೆಯಲ್ಲಿ ಇರದ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳುವುದಿಲ್ಲ ಎಂದು ಶಪಥ ಮಾಡಿರುತ್ತಾರೆ. ಆದ್ದರಿಂದ ಪ್ರಧಾನಿ ಆರ್.ಎಸ್.ಎಸ್ ಸಭೆಯಲ್ಲಿ ಭಾಗವಹಿಸಿರುವುದರಿಂದ ಸಂವಿಧಾನಕ್ಕೆ ಅವಮಾನವಾಗಿದೆ ಎಂದು ಆನಂದ್ ಶರ್ಮಾ ಹೇಳಿದ್ದಾರೆ. ಆರ್.ಎಸ್.ಎಸ್ ಬಿಜೆಪಿಯ ನೀತಿಗಳನ್ನು ರೂಪಿಸುತ್ತದೆ ಎಂಬುದನ್ನು ಒಪ್ಪಿಕೊಳ್ಳಬೇಕು, ಈ ಸಭೆಯ ಮೂಲಕ ಬಿಜೆಪಿ ಹಾಗೂ ಆರ್.ಎಸ್.ಎಸ್ ಬೂಟಾಟಿಕೆ ಬಯಲಾಗಿದೆ ಎಂದು ಆನಂದ್ ಶರ್ಮಾ ಟೀಕಿಸಿದ್ದಾರೆ.