

ನವದೆಹಲಿ: ಆಮ್ ಆದ್ಮಿ ಪಕ್ಷ(ಎಎಪಿ)ದ ಮಾಜಿ ಸಚಿವ, ಶಾಸಕ ಸೋಮನಾಥ್ ಭಾರ್ತಿಗೆ ಸಂಕಷ್ಟ ಎದುರಾಗಿದೆ.
ಶಾಸಕ ಭಾರ್ತಿ ಪತ್ನಿ ನೀಡಿದ್ದ ದೂರಿನನ್ವಯ ಶಾಸಕ ಸೋಮನಾಥ್ ಭಾರ್ತಿ ವಿರುದ್ಧ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಯಾವುದೇ ಕ್ಷಣದಲ್ಲಾದರೂ ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
2015ರ ಜೂನ್ 10ರಂದು ಲಿಪಿಕ ಮಿತ್ರಾ ಅವರು ದೆಹಲಿಯ ಮಹಿಳಾ ಆಯೋಗಕ್ಕೆ ನನ್ನ ಪತಿ ಕೌಟುಂಬಿಕ ಹಿಂಸೆ ನೀಡುತ್ತಿದ್ದು, ನನ್ನ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಮಾನಸಿಕ ಕಿರುಕುಳದಿಂದ ತತ್ತರಿಸಿದ್ದೇನೆ ಎಂದು ಭಾರ್ತಿ ವಿರುದ್ಧ ದೂರು ನೀಡಿದ್ದರು. 2010ರಿಂದಲೂ ಕೌಟುಂಬಿಕ ಹಿಂಸೆ ಆರೋಪವನ್ನು ಭಾರ್ತಿ ವಿರುದ್ಧ ಹೊರಿಸಲಾಗಿದೆ.
ಸದ್ಯ ಆಪ್ ಪಕ್ಷದ ಶಾಸಕರಾಗಿರುವ ಸೋಮನಾಥ್ ಭಾರ್ತಿ ಅವರು ದೆಹಲಿಯ ಮಾಜಿ ಕಾನೂನು ಸಚಿವರಾಗಿದ್ದರು.