

ನವದೆಹಲಿ: ಗುಜರಾತ್ ನಲ್ಲಿ ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂಬ ಹೋರಾಟ ಮುಂದುವರಿಯುತ್ತಿರುವ ಸಂದರ್ಭದಲ್ಲಿ, ಮೀಸಲಾತಿ ನಿಯಮವನ್ನು ಪರಾಮರ್ಶಿಸಬೇಕೆಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಗವತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೀಸಲಾತಿ ನಿಯಮವನ್ನು ರಾಜಕೀಯ ದುರುದ್ದೇಶಕ್ಕಾಗಿ ಬಳಸಿಕೊಳ್ಳಲಾಗುತ್ತಿದ್ದು, ಮೀಸಲಾತಿ ಯಾರಿಗೆ ಅಗತ್ಯವಿದೆ ಮತ್ತು ಎಷ್ಟು ಕಾಲದವರೆಗೆ ಎಂದು ಪರೀಕ್ಷಿಸಲು ರಾಜಕಿಯೇತರ ಸಮಿತಿಯನ್ನು ಸ್ಥಾಪಿಸಬೇಕು ಎಂದು ಹೇಳಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಹಿತಾಸಕ್ತಿ ಗುಂಪುಗಳನ್ನು ರಚಿಸಲಾಗಿದ್ದರೂ ಕೂಡ, ಸಮಾಜದ ಒಂದು ವರ್ಗದ ಆಕಾಂಕ್ಷೆಗಳಿಗೆ ಇನ್ನೊಂದು ವರ್ಗವನ್ನು ಬಲಿಕೊಡಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ನಮ್ಮ ಕೆಲವು ಆಸೆ, ಆಕಾಂಕ್ಷೆಗಳನ್ನು ಈಡೇರಿಸಲು ಹಿತಾಸಕ್ತಿ ಗುಂಪುಗಳನ್ನು ರಚಿಸಲಾಗುತ್ತದೆ. ಆದರೆ ಆ ಹಿತಾಸಕ್ತಿ ಗುಂಪುಗಳ ಮೂಲಕ ಬೇರೆ ವರ್ಗದ ಜನರ ಆಶಯಗಳನ್ನು ಬಲಿಕೊಡಬಾರದು ಎಂದು ಹೇಳಿದರು.
ಎಲ್ಲಾ ಜನರ ಪ್ರಗತಿಗೆ ನಾವು ಅವಿಭಾಜ್ಯ ವಿಧಾನ ಮತ್ತು ದೃಷ್ಟಿಕೋನವನ್ನು ಹೊಂದಿರಬೇಕು. ನನ್ನ ಹಿತಾಸಕ್ತಿಯು ದೇಶದ ಹಿತ ಕಾಯುವುದಾಗಿದೆ. ಇಲ್ಲಿ ಯಾವುದೇ ಸಂಘರ್ಷ, ಚಳುವಳಿ ನಡೆಯದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಸರ್ಕಾರ ಇಂತಹ ವಿಷಯಗಳನ್ನು ಸೂಕ್ಷ್ಮವಾಗಿ ನೋಡಿಕೊಳ್ಳಬೇಕು ಎಂದು ಆರ್ಎಸ್ ಎಸ್ ನ ಮುಖವಾಣಿ ಆರ್ಗನೈಸರ್ ಮತ್ತು ಪಾಂಚಜನ್ಯದಲ್ಲಿ ಹೇಳಿದ್ದಾರೆ.ಸಮಾಜದ ಪ್ರತಿನಿಧಿಗಳನ್ನೊಳಗೊಂಡ ಸಮಿತಿಯನ್ನು ಈ ವಿಚಾರ ನೋಡಿಕೊಳ್ಳಲು ಸ್ಥಾಪಿಸಬೇಕು. ಈ ಸಮಿತಿಯು ಯಾವ ವರ್ಗಕ್ಕೆ ಎಷ್ಟು ಸಮಯ ಮೀಸಲಾತಿ ನೀಡಬೇಕೆಂಬುದನ್ನು ನಿರ್ಧರಿಸುತ್ತದೆ ಎಂದು ಹೇಳಿದರು.
ಮೀಸಲಾತಿ ವಿಚಾರದಲ್ಲಿ ರಾಜಕೀಯ ಮಾಡದೆ ವಾಸ್ತವವಾಗಿ ಜಾರಿಗೆ ತಂದರೆ ಇಂದಿನ ಪರಿಸ್ಥಿತಿ ಎದುರಾಗುವುದಿಲ್ಲ ಎಂದು ಮೋಹನ್ ಭಗವತ್ ಹೇಳಿದ್ದಾರೆ. ಗುಜರಾತ್ ನಲ್ಲಿ ಪಟೇಲ್ ಸಮುದಾಯಕ್ಕೆ ಇತರ ಹಿಂದುಳಿದ ವರ್ಗಗಳಡಿ ಮೀಸಲಾತಿ ನೀಡಬೇಕೆಂಬ ಬೇಡಿಕೆ ಹಿನ್ನೆಲೆಯಲ್ಲಿ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ ಸಂಬಂಧ ಮೋಹನ್ ಭಗವತ್ ಈ ಹೇಳಿಕೆ ನೀಡಿದ್ದಾರೆ.