

ಮುಝಾಫರ್ ನಗರ: ಉತ್ತರಪ್ರದೇಶದ ಮುಝಾಫರ್ ನಗರ ಕೋಮುಗಲಭೆಯಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆಯರಿಗೆ ಮಾತ್ರ ನ್ಯಾಯವಿನ್ನೂ ಸಿಕ್ಕಿಲ್ಲ. ನ್ಯಾಯ ಸಿಗುತ್ತದೆ ಎಂದು ಕಾದು ಕುಳಿತಿರುವ ಮಹಿಳೆಯರಿಗೆ ನಿರಾಸೆಯೇ ಹೆಚ್ಚಾಗಿದೆ.
2 ವರ್ಷಗಳ ಕಾಲ ನಿರಂತರವಾಗಿ ನ್ಯಾಯಾಲಯದ ಮೆಟ್ಟಿಲು ಹತ್ತಿ ಇಳಿದ ಯುವತಿಯರು, ಮಹಿಳೆಯರು ಇದೀಗ ನ್ಯಾಯದ ಮೇಲಿನ ಭರವಸೆ ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದಾರೆ.
ಮುಝಾಫರ್ ನಗರದಿಂದ ದಾಖಲಾದ 6 ಅತ್ಯಾಚಾರ ಪ್ರಕರಣಗಳಲ್ಲಿ 1 ಪ್ರಕರಣವನ್ನು ಸಂತ್ರಸ್ತೆಯ ಮನವಿಯ ಮೇರೆಗೆ ಹೊಸದಾಗಿ ತನಿಖೆ ನಡೆಸುವ ಸಲುವಾಗಿ ಮತ್ತೆ ವಿಚಾರಣೆಗೆತ್ತಿಕೊಳ್ಳಲಾಗಿದ್ದರೆ, ಉಳಿದ 5 ಪ್ರಕರಣಗಳ ವಿಚಾರಣೆ ನಿಧಾನಗತಿಯಲ್ಲಿ ನಡೆಯುತ್ತಿದೆ.
ಅತ್ಯಾಚಾರ ಸಂತ್ರಸ್ತೆಯರು ಆರ್ಥಿಕವಾಗಿ ಬಹಳವೇ ಹಿಂದುಳಿದಿದ್ದು, ನ್ಯಾಯಾಲಯದ ನಿಧಾನಗತಿ ತನಿಖೆಯಿಂದ ಬೇಸತ್ತು ಹೋಗಿದ್ದಾರೆ. ನಮ್ಮ ಪ್ರಾಥಮಿಕ ಅವಶ್ಯಕತೆಗಳನ್ನು ಪೂರೈಸುಲು ಸಾಧ್ಯವಾಗದ ಸ್ಥಿತಿಯಲ್ಲಿ ನಾವಿದ್ದು, ವಕೀಲರ ದುಬಾರಿ ಶುಲ್ಕಗಳನ್ನು ಪಾವತಿಸಿ ನ್ಯಾಯಕ್ಕಾಗಿ ಹೋರಾಟ ನಡೆಸಿವುದು ಅಸಾಧ್ಯವಾಗಿದೆ ಎಂದು ಲಾಯ್ ಗ್ರಾಮದ ಒಬ್ಬ ಸಂತ್ರಸ್ತೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸಂತ್ರಸ್ತರ ಕುಟುಂಬಿಕರೂ ಕೂಡಾ ಪ್ರಕರಣದ ಕುರಿತು ಮಾತನಾಡಲೂ ಭಯಪಡುವಂತಹಾ ವಾತಾವರಣ ಸೃಷ್ಠಿಯಾಗಿದೆ, ಸಂತ್ರಸ್ತೆಯರ ನರಕ ಸದೃಷ ಜೀವನವನ್ನು ಕಂಡು ನಾವು ದೂರದಿಂದ ದುಃಖಿಸುವುದರ ಹೊರತು ಇನ್ನೇನು ಮಾಡಲಿಕ್ಕಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಅತ್ಯಾಚಾರದ ದೂರು ಹಿಂಪಡೆಯಲು ಸಂತ್ರಸ್ತೆಯರು ಮೇಲೆ ಆರೋಪಿಗಳು ಒತ್ತಡ ಹೇರುತ್ತಿದ್ದು, ನ್ಯಾಯಾಲಯದ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಯತ್ನ ನಡೆಸುತ್ತಿದ್ದಾರೆ. ಆದರೆ, ನ್ಯಾಯಾಲಯ ಮಾತ್ರ ಇಂತಹ ಆರೋಪಿಗಳಿಗೆ ಅವಕಾಶ ನೀಡಬಾರದು ಎಂದು ಸುಪ್ರೀಂ ಕೋರ್ಟ್ ನ ಹಿರಿಯ ವಕೀಲೆ ವೃಂದಾ ಗ್ರೋವರ್ ಹೇಳಿದ್ದಾರೆ.
ಈ ದುರ್ಘಟನೆ ನಡೆದು 2 ವರ್ಷಗಳೇ ಕಳೆದಿದ್ದರೂ ಇನ್ನು ಕೆಲವು ಆರೋಪಿಗಳ ಮೇಲೆ ಎಫ್ ಐಆರ್ ದಾಖಲಾಗಿಲ್ಲ. ಅಲ್ಲದೇ ಇನ್ನೂ ಕೂಡಾ ಪ್ರಕರಣದ ವಿಚಾರಣೆಯೂ ಆರಂಭವಾಗಿಲ್ಲ. ಇಷ್ಟೇ ಅಲ್ಲದೇ, ಆರೋಪಿಗಳು ಜೀವಬೆದರಿಕೆ ಹಾಕಿದ್ದು, ಒಂದಿಬ್ಬರು ಸಂತ್ರಸ್ತೆಯರು ಆರೋಪಿಗಳ ಗುರುತು ಪತ್ತೆಗೆ ನಿರಾಕರಿಸಿದ್ದಾರೆ.
ಅತ್ಯಾಚಾರ ಪ್ರಕರಣದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ 22 ಆರೋಪಿಗಳಲ್ಲಿ 16 ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆ ಗೊಂಡಿದ್ದಾರೆ. ಸ್ಥಳೀಯ ಪುಢಾರಿಗಳು ಈ ಆರೋಪಿಗಳಿಗೆ ಕಾನೂನು ಮತ್ತು ಆರ್ಥಿಕ ಸಹಾಯ ಒದಗಿಸುತ್ತಿದ್ದಾರೆ.
ಉತ್ತರ ಪ್ರದೇಶ ಸರಕಾರ ಅತ್ಯಾಚಾರ ಸಂತ್ರಸ್ತೆಯರ ರಕ್ಷಣೆಯ ಕಟ್ಟಪ್ಪಣೆ ನಿಡಿದೆಯಾದರೂ ಸಂತ್ರಸ್ತೆಯರು ಮಾತ್ರ ಭೀತಿಯಿಂದಲೇ ದಿನ ದೂಡುತ್ತಿದ್ದಾರೆ, ಆರೋಪಿಗಳ ವಿರುದ್ಧ ವೈದ್ಯಕೀಯ ಪರೀಕ್ಷೆಗಳ ಸಾಕ್ಷಿಗಳಿರುವಾಗ, ಎಷ್ಟೇ ಬೆದರಿಕೆ ನಿಡಿದರೂ ಕಾನೂನಿನ ಕೈಯಿಂದ ಅವರು ತಪ್ಪಿಸಿಕೊಳ್ಳಲಾರರು ಎಂಬ ನಿರೀಕ್ಷೆ ಇದೆ ಎಂದು ವಕೀಲ ಸಾಜಿದ್ ಹೇಳುತ್ತಾರೆ.
2013ರಲ್ಲಿ ಜಾಟ್ ಸಮುದಾಯ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಭುಗಿಲೆದ್ದ ಕೋಮು ಹಿಂಸಾಚಾರದಲ್ಲಿ 61 ಬಲಿ ಪಡೆದುಕೊಂಡ 50,000 ಜನರನ್ನು ಅತಂತ್ರರಾಗಿರಿಸಿತ್ತು.