

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ತೃತೀಯ ರಂಗಕ್ಕೆ ಬಹುಮತ ಸಿಗಲಿದ್ದು ತೃತೀಯ ರಂಗದ ಸರ್ಕಾರ ಅಸ್ಥಿತ್ವಕ್ಕೆ ಬರಲಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೇಳಿದ್ದಾರೆ.
ಚುನಾವಣಾ ಪ್ರಚಾರ ಕೈಗೊಂಡಿರುವ ಅಖಿಲೇಶ್ ಯಾದವ್, ರಾಜ್ಯದ 243 ವಿಧಾನಸಭಾ ಕ್ಷೇತ್ರಗಳಲ್ಲಿ ತೃತೀಯ ರಂಗದ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಆರು ಪಕ್ಷಗಳ ಮೈತ್ರಿ ಹೊಂದಿರುವ ತೃತೀಯ ರಂಗ, ಬಿಹಾರದಲ್ಲಿ ಮುಂದಿನ ಸರ್ಕಾರವನ್ನು ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪರೋಕ್ಷವಾಗಿ ನಿತೀಶ್ ಕುಮಾರ್ ವಿರುದ್ಧ ಹರಿಹಾಯ್ದ ಅಖಿಲೇಶ್ ಯಾದವ್, ಕೆಲವರು ಬಿಹಾರವನ್ನು ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದ್ದರು. ಆದರೆ ವಾಸ್ತವದಲ್ಲಿ ಅಭಿವೃದ್ಧಿ ಆಗಿಲ್ಲ ಎಂದು ಟೀಕಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಅಭಿವೃದ್ಧಿಯಾಗುತ್ತಿದ್ದರೂ ಅದರ ಬಗ್ಗೆ ಯಾವುದೇ ಮಾಧ್ಯಮಗಳು ವರದಿ ಮಾಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎನ್.ಸಿ.ಪಿ, ಜನಾಧಿಕಾರ್ ಪಕ್ಷ, ನ್ಯಾಷನಲಿಸ್ಟ್ ಪೀಪಲ್ಸ್ ಪಕ್ಷ, ಸಮಾಜವಾದಿ ಜನತಾ ಪಕ್ಷಗಳ ಮೈತ್ರಿಯಿಂದ ಬಿಹಾರದಲ್ಲಿ ತೃತೀಯ ರಂಗ ಅಸ್ತಿತ್ವಕ್ಕೆ ಬಂದಿದೆ.