ಪಂಜಾಬ್ ದಾಳಿಗೆ ಉಗ್ರರು ಸಂಚು: ಎಚ್ಚರಿಕೆ ನೀಡಿದ ಗುಪ್ತಚರ ಇಲಾಖೆ

ಕೇವಲ 6 ತಿಂಗಳಿನಲ್ಲಿ 2 ಬಾರಿ ಉಗ್ರರ ದಾಳಿಗೊಳಗಾಗಿದ್ದ ಪಂಜಾಬ್ ಮೇಲೆ ಇದೀಗ ಮತ್ತೆ ಉಗ್ರರು ದಾಳಿ ನಡೆಸಲು ಸಂಚು ರೂಪಿಸಿದ್ದು, ಪಂಜಾಬ್ ನೊಳಗೆ...
ಪಂಜಾಬ್ ದಾಳಿಗೆ ಉಗ್ರರು ಸಂಚು: ಎಚ್ಚರಿಕೆ ನೀಡಿದ ಗುಪ್ತಚರ ಇಲಾಖೆ
ಪಂಜಾಬ್ ದಾಳಿಗೆ ಉಗ್ರರು ಸಂಚು: ಎಚ್ಚರಿಕೆ ನೀಡಿದ ಗುಪ್ತಚರ ಇಲಾಖೆ

ಚಂಡೀಗಢ: ಕೇವಲ 6 ತಿಂಗಳಿನಲ್ಲಿ 2 ಬಾರಿ ಉಗ್ರರ ದಾಳಿಗೊಳಗಾಗಿದ್ದ ಪಂಜಾಬ್ ಮೇಲೆ ಇದೀಗ ಮತ್ತೆ ಉಗ್ರರು ದಾಳಿ ನಡೆಸಲು ಸಂಚು ರೂಪಿಸಿದ್ದು, ಪಂಜಾಬ್ ನೊಳಗೆ ನುಸುಳುವ ಸಲುವಾಗಿ ಉಗ್ರರು ಜಮ್ಮುವಿನಿಂದ ನಾಗರೀಕ ವಾಹನಗಳಲ್ಲಿ ಪ್ರಯಾಣ ನಡೆಸುತ್ತಿದ್ದಾರೆಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಗುಪ್ತಚರ ಇಲಾಖೆ ಇದೀಗ ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಉಗ್ರರು ಪ್ರಮುಖವಾಗಿ ಪಂಜಾಬ್ ನ್ನು ತಮ್ಮ ಗುರಿಯಾಗಿಸಿಕೊಂಡಿದ್ದು, ದೆಹಲಿ, ಗೋವಾ ಹಾಗೂ ಮುಂಬೈ ಮೇಲೂ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ. ಹೀಗಾಗಿ ತೀವ್ರ ಕಟ್ಟೆಚ್ಚರ ವಹಿಸುವಂತೆ ತಿಳಿಸಿದೆ.
ಜಮ್ಮುವಿನ ಸ್ಥಳೀಯ ನಾಗರಿಕರ ಕಾರಿನಿಂದ JK-01 AB-2654 ಮೂವರು ಉಗ್ರರು ಪ್ರಯಾಣ ಬೆಳೆಸುತ್ತಿದ್ದು, ಉಗ್ರರು ಸಾಕಷ್ಟು ಶಸ್ತ್ರಾಸ್ತ್ರಗಳು ಹಾಗೂ ಆತ್ಮಾಹುತಿ ಬೆಲ್ಟ್ ಗಳನ್ನು ಹೊತ್ತು ಪಂಜಾಬ್ ಗೆ ಬರುತ್ತಿದ್ದಾರೆಂದು ಹೇಳಿದೆ.

ಇನ್ನು ಗುಪ್ತಚರ ಇಲಾಖೆ ನೀಡಿರುವ ಮಾಹಿತಿಯನ್ವಯ ಈಗಾಗಲೇ ಕಟ್ಟೆಚ್ಚರ ವಹಿಸಿರುವ ಪಂಜಾಬ್ ನ ಅಧಿಕಾರಿಗಳು ಪಂಜಾಬ್ ಗೆ ಬರುವ ಎಲ್ಲಾ ವಾಹನಗಳನ್ನು ತೀವ್ರವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಉಗ್ರರು ಉನ್ನತ ಕಟ್ಟಡಗಳು, ಜನನಿ ಬಿಡ ಪ್ರದೇಶಗಳಾದ ಧಾರ್ಮಿಕ ಕ್ಷೇತ್ರಗಳು, ಮಾರುಕಟ್ಟೆಗಳು, ಮಾಲ್ ಗಳು, ಶೈಕ್ಷಣಿಕ ಸಂಸ್ಥೆಗಳು ಹಾಗೂ ರೈಲ್ವೆ ನಿಲ್ದಾಣಗಳ ಮೇಲೆ ದಾಳಿ ಮಾಡಲು ಸಂಚು ರೂಪಿಸಿದ್ದು, ಪಂಜಾಬ್ ನಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಪಂಜಾಬ್ ಪಠಾಣ್ ಕೋಟ್ ವಾಯುನೆಲೆ ಮೇಲೆ ಉಗ್ರರು ಇತ್ತೀಚೆಗಷ್ಟೇ ದಾಳಿ ನಡೆಸಿದ್ದರು. ಉಗ್ರರ ದಾಳಿಗೆ 7 ಯೋಧರು ಹುತಾತ್ಮರಾಗಿದ್ದರು. ದಾಳಿಗೂ ಮೊದಲು ಉಗ್ರರು ಅಧಿಕಾರಿಯೊಬ್ಬರ ಕಾರನ್ನು ಅಪಹರಿಸಿದ್ದರು. ನಂತರ ದಾಳಿಗೆ ಸಂಚು ರೂಪಿಸಿದ್ದರು. ಕಾರು ಅಪಹರಣಕ್ಕೊಳಗಾದ ಮರುದಿನವೇ ವಾಯುನೆಲೆ ಮೇಲೆ ದಾಳಿ ನಡೆದಿತ್ತು. ಇನ್ನು ಕಳೆದ ವರ್ಷದ ಜುಲೈ ತಿಂಗಳಿನಲ್ಲಿಯೂ ಕೂಡ ದೀನಾನಗರದ ಗುರ್ದಾಸ್ ಪುರ ಜಿಲ್ಲೆಯ ಮೇಲೂ ಉಗ್ರರು ದಾಳಿ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com