

ನವದೆಹಲಿ: ಉಕ್ರೇನ್ ನ ಉಜ್ಗೊರೊದ್ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮೂವರು ಭಾರತೀಯ ವಿದ್ಯಾರ್ಥಿಗಳಿಗೆ ಅಲ್ಲಿನ ಅನಾಮಿಕ ವ್ಯಕ್ತಿಗಳು ಚೂರಿ ಇರಿದಿದ್ದು, ಪರಿಣಾಮ 2 ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಮತ್ತೋರ್ವ ವಿದ್ಯಾರ್ಥಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಸಾವನ್ನಪ್ಪಿದ್ದ ವಿದ್ಯಾರ್ಥಿಗಳನ್ನು ಮುಜಾಫರ್ ನಗರದ ಪ್ರಣವ್ ಶೈಂದಿಲ್ಯಾ, ಉತ್ತರ ಪ್ರದೇಶದ ಘಾಜಿಯಾಬಾದ್ ನ ಅಂಕುಲ್ ಸಿಂಗ್ ಎಂದು ಗುರ್ತಿಸಲಾಗಿದೆ. ಇನ್ನು ಗಾಯಗೊಂಡಿರುವ ಆಗ್ರಾ ಮೂಲದ ಇಂದ್ರಜೀತ್ ಸಿಂಗ್ ಚೌಹಾಣ್ ಸ್ಥಿತಿ ಕೂಡ ಚಿಂತಾಜನಕವಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಪ್ರಕರಣ ದಾಖಲಿಸಿಕೊಂಡಿದ್ದ ಉಕ್ರೇನ್ ಅಧಿಕಾರಿಗಳು ಗಾಯಗೊಂಡ ಚೌಹಾಣ್ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಇದರಂತೆ ಉಕ್ರೇನ್ ರಾಷ್ಟ್ರೀಯತೆ ಹೊಂದಿ ಗಡಿ ದಾಟಲು ಯತ್ನಿಸುತ್ತಿದ್ದ ವ್ಯಕ್ತಿಗಳನ್ನು ಅಲ್ಲಿನ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದು, ಪಾಸ್'ಪೋರ್ಟ್ ಹಾಗೂ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.