ನವದೆಹಲಿ: ಓಲಾ, ಊಬರ್ ಟ್ಯಾಕ್ಸಿಗಳು ದೆಹಲಿ ಸರ್ಕಾರ ನಿಗದಿಪಡಿಸಿದಕ್ಕಿಂತ ಹೆಚ್ಚು ದರ ವಿಧಿಸಿದರೆ ಆ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಅವರು ಸೋಮವಾರ ಎಚ್ಚರಿಸಿದ್ದಾರೆ.
ಆ್ಯಪ್ ಆಧಾರಿತ ಓಲಾ, ಊಬರ್ ಟ್ಯಾಕ್ಸಿ ಸೇವೆಗಳಲ್ಲಿ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ದರ ವಿಧಿಸಿದರೆ ಪರವಾನಗಿ ರದ್ದತಿಯೊಂದಿಗೆ ವಾಹನಗಳ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಕೇಜ್ರೀವಾಲ್ ಟ್ವಿಟ್ ಮೂಲಕ ಎಚ್ಚರಿಸಿದ್ದಾರೆ.
ಓಲಾ ಮತ್ತು ಊಬರ್ ಸಂಸ್ಥೆಗಳು ಸಂಚಾರ ದಟ್ಟಣೆ ಅವಧಿಯಲ್ಲಿ ನಿಗದಿತ ಶುಲ್ಕಕ್ಕಿಂತ ಹೆಚ್ಚು ಶುಲ್ಕ ವಿಧಿಸುತ್ತಿರುವ ಬಗ್ಗೆ ಸರ್ಕಾರಕ್ಕೆ ಸಾರ್ವಜನಿಕರಿಂದ ಹಲವು ದೂರುಗಳು ಬಂದಿವೆ. ಅಲ್ಲದೆ ಸಮ-ಬೆಸ ಯೋಜನೆ ಜಾರಿಗೊಳಿಸಿದ ಸಮಯದಲ್ಲಿ ಹೆಚ್ಚು ದರಗಳನ್ನು ವಿಧಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಅವರು ಈ ಎಚ್ಚರಿಕೆ ನೀಡಿದ್ದಾರೆ.