
ಅಹ್ಮದಾಬಾದ್: ಗುಜರಾತ್ ನಲ್ಲಿ ಮತ್ತೆ ಪಟೇಲ್ ಸಮುದಾಯದ ನಾಯಕರು ಬೀದಿಗಿಳಿದಿದ್ದು, ಭಾನುವಾರ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.
ಪಟೇಲ್ ಸಮುದಾಯಕ್ಕೆ ಮೀಸಲಾತಿ ಆಗ್ರಹಿಸಿ ಈ ಹಿಂದೆ ನಡೆಸಲಾಗಿದ್ದ ಪ್ರತಿಭಟನೆ ವೇಳೆ ಹಾರ್ದಿಕ್ ಪಟೇಲ್ ಹಾಗೂ ಇನ್ನಿತರೆ ನಾಯಕರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದರು. ಈ ಹಿನ್ನೆಲೆಯಲ್ಲಿ ನಾಯಕರನ್ನು ಬಿಡುಗಡೆ ಮಾಡುವಂತೆ ಕೋರಿ ಸರ್ದಾರ್ ಪಟೇಲ್ ಗುಂಪಿನ ನೂರಾರು ಪ್ರತಿಭಟನಾಕಾರರು ನಿನ್ನೆ ಜೈಲ್ ಬರೋ ಆಂದೋಲನ ಸಮಿತಿ ಚಳುವಳಿ ನಡೆಸಲು ತೀರ್ಮಾನಿಸಿತ್ತು.
ಇದರಂತೆ ನಿನ್ನೆ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ವೇಳೆಯಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂತರ ಪೊಲೀಸರ ವಾಹನಗಳಿಗೆ ಬೆಂಕಿ ಹಚ್ಚಿ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದಾಗಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿದ್ದಾರೆ.
ಇನ್ನು ಪ್ರತಿಭಟನೆ ವೇಳೆ ಸರ್ದಾರ್ ಜೀ ಪಟೇಲ್ ಗುಂಪಿನ ಮುಖಂಡ ಲಾಲ್ ಜೀ ಅವರ ತಲೆಗೆ ತೀವ್ರವಾಗಿ ಪೆಟ್ಟಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತಿಭಟನೆ ವೇಳೆ ಗುಜರಾತ್ ಪೊಲೀಸರು 400ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದೀಗ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ತೀರ್ಮಾನಿಸಿರುವ ಸರ್ದಾರ್ ಪಟೇಲ್ ಗುಂಪು ಹಾಗೂ ಪಟೀದಾರ್ ಅನಾಮತ್ ಆಂದೋಲನ ಸಮಿತಿ ಜಂಟಿಯಾಗಿ ಗುಜರಾತ್ ರಾಜ್ಯಕ್ಕೆ ಬಂದ್ ಗೆ ಕರೆ ನೀಡಿದೆ.
ಇನ್ನು ಬಂದ್ ಕರೆ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಮೆಹ್ಸಾಣಾದಲ್ಲಿ ಕರ್ಫ್ಯೂ ಜಾರಿಗೊಳಿಸಿದೆ. ಅಲ್ಲದೆ, ಮೆಹ್ಸಾಣಾ, ಸೂರತ್, ಅಹಮದಾಬಾದ್ ಬಂದ್ ನಲ್ಲಿ ಇಂಟರ್ನೆಟ್ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ.
ಈ ಕುರಿತಂತೆ ಮಾತನಾಡಿರುವ ಸೂರತ್ ಪೊಲೀಸ್ ಆಯುಕ್ತ ಆಶಿಷ್ ಭಾಟಿಯಾ ಅವರು, ಹಿಂಸಾಚಾರದ ಬಳಿಕ 436 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಈ ನಡುವೆ ರಾಜ್ಯ ಬಂದ್ ಗೆ ಕರೆ ನೀಡಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ನಾಳೆ ರಾತ್ರಿ 11 ಗಂಟೆವರೆಗೆ ಇಂಟರ್ ನೆಟ್ ಸೇವೆಯನ್ನು ಕಡಿತಗೊಳಿಸಲಾಗಿದೆ ಮತ್ತು ಬಲ್ಕ್ ಎಸ್ಎಂಎಸ್ ಸೇವೆಯನ್ನೂ ರದ್ದುಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಹಿಂಸಾಚಾರ ಪ್ರತಿಭಟನೆ ಕುರಿತಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಮುಖ್ಯಮಂತ್ರಿ ಆನಂದಿಬೆನ್ ಅವರಿಗೆ ದೂರವಾಣಿ ಮೂಲಕ ಸಂಭಾಷಣೆ ನಡೆಸಿದ್ದಾರೆಂದು ಹೇಳಲಾಗುತ್ತಿದ್ದು, ಸಂಭಾಷಣೆ ವೇಳೆ ಶಾಂತಿ ಕಾಪಾಡುವ ಉದ್ದೇಶದಿಂದ ಸರ್ಕಾರ ಕೆಲವು ನಿರ್ಧಾರಗಳನ್ನು ಕೈಗೊಂಡಿರುವುದಾಗಿ ಹೇಳಿದ್ದಾರೆಂದು ತಿಳಿದುಬಂದಿದೆ.
Advertisement