

ಪುಣೆ: ಶಿವಸೇನೆ ನಾಯಕ ಹಾಜಿ ಅರಾಫತ್ ಶೇಖ್ ಬೆದರಿಕೆ ಕೆಲಸ ಮಾಡುವುದಿಲ್ಲ. ಏ.28 ರಂದು ನಾವು ಹಾಜಿ ಅಲಿ ದರ್ಗಾದೊಳಗೆ ಹೋಗಿಯೇ ತೀರುತ್ತೇವೆಂದು ಭೂಮಾತಾ ಬ್ರಿಗೇಡ್ ಮುಖ್ಯಸ್ಥೆ ತೃಪ್ತಿ ದೇಸಾಯಿ ಅವರು ಶನಿವಾರ ಹೇಳಿದ್ದಾರೆ.
ಶಿವಸೇನೆ ನಾಯಕ ನೀಡಿದ್ದ ಬೆದರಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಈ ರೀತಿಯ ಬೆದರಿಕೆಗಳು ತಪ್ಪು. ಪ್ರಜಾಪ್ರಭುತ್ವಕ್ಕಾಗಿ ಪ್ರತಿಭಟನೆ ಮಾಡಿರುವ ಹಕ್ಕು ಎಲ್ಲರಿಗೂ ಇದೆ. ಈ ರೀತಿಯ ಹೇಳಿಕೆಯಿಂದ ಹಾಜಿ ಅರಾಫತ್ ಶೇಖ್ ಅವರು ಮಹಿಳೆಯರಿಗೆ ಅವಮಾನ ಮಾಡಿದ್ದಾರೆಂದು ಹೇಳಿದ್ದಾರೆ.
ಬೆದರಿಕೆ ಹೇಳಿಕೆ ಕುರಿತಂತೆ ಶಿವಸೇನೆ ಸ್ಪಷ್ಟನೆ ನೀಡಬೇಕು. ಶಿವಸೇನೆ ಒಂದು ವೇಳೆ ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸುವುದೇ ಆದರೆ, ಹಾಜಿ ಅರಾಫತ್ ಅವರನ್ನು ವಜಾಗೊಳಿಸಬೇಕೆಂದು ಹೇಳಿದ್ದಾರೆ.
ಮುಂಬೈ ಹಾಜಿ ಅಲಿ ದರ್ಗಾದೊಳಗೆ ಮಹಿಳೆಯರಿಗೆ ಪ್ರವೇಶ ಅನುಮತಿ ನೀಡಬೇಕೆಂದು ಬಯಸಿ ಭೂಮಾತಾ ರಣ್‌ರಾಗಿನಿ ಬ್ರಿಗೇಡ್ ಚಳುವಳಿ ಆರಂಭಿಸಲಿದೆ ಎಂದು ತೃಪ್ತಿ ದೇಸಾಯಿ ಹೇಳಿಕೆ ನೀಡಿರುವ ಬೆನ್ನಲ್ಲೇ ಶಿವಸೇನೆ ನಾಯಕ ಹಾಜಿ ಅರಾಫತ್ ಶೇಕ್ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಭೂಮಾತಾ ರಣ್‌ರಾಗಿನಿ ಬ್ರಿಗೇಡ್ ನಾಯಕಿ ತೃಪ್ತಿ ದೇಸಾಯಿ ಹಾಜಿ ಅಲಿ ದರ್ಗಾಗೆ ಪ್ರವೇಶಿಸಲು ಯತ್ನಿಸಿದರೆ ಆಕೆಗ ಚಪ್ಪಲಿಯೇಟು ಬೀಳುತ್ತದೆ ಎಂದು ಹೇಳಿದ್ದರು.