ಗುವಾಹಟಿ: ಇಡೀ ದೇಶವೇ ಬೇಸಿಗೆಯ ಬಿಸಿಲಿಗೆ ಬೇಯುತ್ತಿರುವಾಗ ಅಸ್ಸಾಂನಲ್ಲಿ ಮಾತ್ರ ಭಾರಿ ಮಳೆ. ಪರಿಣಾಮ ಅಲ್ಲಿನ 6 ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿದ್ದು, ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮಂದಿ ಸೂರು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ ಅಲ್ಲಿನ ಜೊರ್ಹಟ್, ಶಿವಸಾಗರ್, ಕಚರ್, ಟಿನ್ಸುಕಿಯಾ, ದಿಬ್ರುಗಢ ಮತ್ತು ಚರೈಡಿಯೊ ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿದ್ದು, ಐದು ಸಾವಿರ ಹೆಕ್ಟೇರ್ಗಿಂತಲೂ ಹೆಚ್ಚು ಕೃಷಿ ಭೂಮಿ ಹಾನಿಗೀಡಾಗಿದೆ.
ಅಸ್ಸಾಂನ ಆರು ಜೆಲ್ಲೆಗಳಲ್ಲಿ ಒಟ್ಟು 40 ನಿರಾಶ್ರಿತ ಕೇಂದ್ರಗಳನ್ನು ತೆರೆಯಲಾಗಿದ್ದರೂ ಕೇವಲ 7,412 ಜನರಿಗಷ್ಟೇ ಪುನರ್ವಸತಿ ಕಲ್ಪಿಸಲು ಸಾಧ್ಯವಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.
ಸೇನೆ, ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡಗಳು ಈಗಾಗಲೇ ಈ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಜೋರಾಗಿ ನಡೆಯುತ್ತಿದೆ.