

ಮುಂಬೈ: ನೋಟುನಿಷೇಧ ಬಳಿಕ ಕಾಳಧನಿಕರ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ ಮುಂದುವರೆದಿರುವಂತೆಯೇ ಮುಂಬೈನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ಅಪಾರ ಪ್ರಮಾಣದ ನಗದನ್ನು ಪೊಲೀಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಮೂಲಗಳ ಪ್ರಕಾರ ವಾಣಿಜ್ಯ ನಗರಿ ಮುಂಬೈನ ಅಂಧೇರಿಯಲ್ಲಿರುವ ಜುಹು-ವರ್ಸೋವಾ ಲಿಂಕ್ ರಸ್ತೆಯಲ್ಲಿ ಹಣ ಹೊತ್ತು ಸಾಗುತ್ತಿದ್ದ ಕಾರನ್ನು ಅಡ್ಡಗಟ್ಟಿದ ಅಧಿಕಾರಿಗಳು ಅದರಲ್ಲಿದ್ದ ಸುಮಾರು 1.40 ಕೋಟಿ ರು.ನಗದನ್ನು ವಶಪಡಿಸಿಕೊಂಡಿದ್ದಾರೆ. 1.40 ಕೋಟಿ ರು.ನ ಸಂಪೂರ್ಣ ಹಣ ಹೊಸ ನೋಟುಗಳಲ್ಲಿತ್ತು ಎಂದು ತಿಳಿದುಬಂದಿದೆ. ಅಂತೆಯೇ ಕಾರಿನಲ್ಲಿ ಹಣ ಸಾಗಿಸುತ್ತಿದ್ದ ಆರೋಪ ಮೇರೆಗೆ ಮೂವರನ್ನು ವಶಕ್ಕೆ ಪಡೆದಿರುವ ಅಂಧೇರಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಮುಂಬೈ ಪೊಲೀಸ್ ವಕ್ತಾರ ಡಿಸಿಪಿ ಅಶೋಕ್ ಡುಢೆ ಅವರು, ಕಾರಿನಲ್ಲಿ ಹಣ ಸಾಗಿಸುತ್ತಿರುವ ಕುರಿತು ಮಾಹಿತಿ ಬಂದಿತ್ತು. ಅದರಂತೆ ಕಾರ್ಯಾಚರಣೆ ನಡೆಸಿ ಅಂಧೇರಿ ಲಿಂಕ್ ರಸ್ತೆ ಬಳಿ ಕಾರನ್ನು ಅಡ್ಡಗಟ್ಟಿ ಹಣ ವಶಕ್ಕೆ ಪಡೆಯಲಾಗಿದೆ. ಅಂತೆಯೇ ಮೂವರನ್ನು ವಶಕ್ಕೆ ಪಡೆಯಲಾಗಿದ್ದು ಅವರನ್ನು ವಿಚಾರಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.