

ನವದೆಹಲಿ: 17 ವರ್ಷದ ಬಾಲಕಿಯನ್ನು ಆಕೆಯ ಸ್ನೇಹಿತನೇ ಗುಂಡಿಟ್ಟು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯೊಂದು ನೈಋುತ್ಯ ದೆಹಲಿಯ ನಜಾಫ್'ಘಡ್ ಪ್ರದೇಶದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ಬಾಲಕಿ ತನ್ನ ಇಬ್ಬರು ಸ್ನೇಹಿತರಾದ ಶುಭಂ ಹಾಗೂ ಯೋಗೇಶ್ ಎಂಬುವವರೊಂದಿಗೆ ರಜೌರಿ ಗಾರ್ಡೆನ್ ಗೆ ಊಟಕ್ಕೆಂದು ಹೋಗಿದ್ದಾಳೆ, ಊಟ ಮುಗಿಸಿ ಕಾರಿನಲ್ಲಿ ಮರಳು ಬರುವಾಗ ಶಾಪಿಂಗ್ ಗೆಂದು ದ್ವಾರಕಾ ಬಳಿ ಕಾರನ್ನು ನಿಲ್ಲಿಸಿದ್ದಾರೆ.
ಸಂಜೆ ಸುಮಾರು 7.30ರ ಸುಮಾರಿಗೆ ಬಾಲಕಿಯ ತಾಯಿ ಫೋನ್ ಮಾಡಿ ಬೇಗನೆ ಮನೆಗೆ ಬರುವಂತೆ ತಿಳಿಸಿದ್ದಾರೆ. ಕಾರು ಬಾಲಕಿಯ ಮನೆಯನ್ನು ಸಮೀಪಿಸುತ್ತಿದ್ದಂತೆಯೇ ಮೊದಲು ಯೋಗೇಶ್ ಕಾರಿನಿಂದ ಹೊರ ಬಂದಿದ್ದಾನೆ. ಈ ವೇಳೆ ಶುಭಂ ತನ್ನ ಬಳಿಯಿದ್ದ ಪಿಸ್ತೂಲಿನಿಂದ ಬಾಲಕಿಯ ಮೇಲೆ ಗುಂಡು ಹಾರಿಸಿ, ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಗುಂಡು ಹಾರಿದ ಶಬ್ಧ ಕೇಳುತ್ತಿದ್ದಂತೆ ಬಾಲಕಿಯ ತಾಯಿ ಕಾರಿನ ಬಳಿ ಬಂದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗಳನ್ನು ನೋಡಿ ಆಘಾತಗೊಂಡಿದ್ದಾರೆ. ಕೂಡಲೇ ಬಾಲಕಿಯ ಮತ್ತೊಬ್ಬ ಸ್ನೇಹಿತ ಯೋಗೇಶ್ ನ ಸಹಾಯದೊಂದಿಗೆ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರಿಶೀಲನೆ ನಡೆಸಿದ ವೈದ್ಯರು ಬಾಲಕಿ ಸಾವನ್ನಪ್ಪಿದ್ದಾಳೆಂದು ಹೇಳಿದ್ದಾರೆ.
ಹತ್ಯೆಗೆ ಪ್ರಮುಖ ಕಾರಣ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹತ್ಯೆಗೆ ಬಳಸಲಾಗಿರುವ ಪಿಸ್ತೂಲನ್ನು ವಶಕ್ಕೆ ಪಡೆದುಕೊಂಡಿದ್ದಾರೆ, ಆರೋಪಿ ಶುಭಂ ಹಾಗೂ ಆತನ ಕುಟುಂಬಸ್ಥರು ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.