

ಗೋರಖ್ಪುರ: ಉತ್ತರಪ್ರದೇಶದ ಗೋರಖ್ಪುರ ಬಳಿ ಕಾರು ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಕೇಂದ್ರ ರೈಲ್ವೆ ಹಾಗೂ ಸಂವಹನ ಇಲಾಖೆ ರಾಜ್ಯ ಸಚಿವ ಮನೋಜ್ ಸಿನ್ಹಾ ಅವರು ಗಾಯಗೊಂಡಿದ್ದಾರೆಂದು ಶನಿವಾರ ತಿಳಿದುಬಂದಿದೆ.
ಕಳೆದ ರಾತ್ರಿ 7.15ರ ಸುಮಾರಿಗೆ ಘಟನೆ ನಡೆದಿದೆ. ಬಾರಾಂಬಕಿಯಿಂದ ಗೋರಖ್ಪುರ ಬಳಿ ಬರುತ್ತಿದ್ದ ವೇಳೆ ತಪತಿ ನದಿ ಬ್ರಿಡ್ಜ್ ಬಳಿ ಅಪಘಾತ ಸಂಭವಿಸಿದೆ. ಸಚಿವರ ಎಡಗಾಲಿಕೆ ಗಾಯವಾಗಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗಾಯಗೊಂಡ ಮನೋಜ್ ಸಿನ್ಹಾ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸಿನ್ಹಾ ಅವರು ಕುಳಿತಿದ್ದ ಕಾರಿನ ಮುಂದಿದ್ದ ವಾಹನವೊಂದು ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದೆ. ಈ ವೇಳೆ ಹಿಂದಿದ್ದ ಸಚಿವರ ಕಾರು ಮುಂದಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಸಚಿವರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.