

ನವದೆಹಲಿ: ಅತ್ಯಂತ ಕಡಿಮೆ ತಾಪಮಾನ ಇರುವ ಯುದ್ಧಭೂಮಿ ಸಿಯಾಚಿನ್‌ನಲ್ಲಿ ಹಿಮಸಮಾಧಿಯಾದ ಭಾರತೀಯ ಸೈನಿಕರನ್ನು ಹೊರತೆಗೆಯಲು ಸಹಾಯಹಸ್ತ ಚಾಚಿದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಧನ್ಯವಾದ ತಿಳಿಸಿದೆ.
ಹಿಮಪಾತಕ್ಕೆ ಸಿಲುಕಿ ಸಾವನ್ನಪ್ಪಿದ್ದ 10 ಯೋಧರ ಮೃತದೇಹಗಳನ್ನು ಹೊರತೆಗೆಯಲು ಪಾಕಿಸ್ತಾನ ಸೇನೆ ಸಹಾಯ ಮಾಡಲು ಮುಂದಾಗಿತ್ತು. ಆದರೆ ನಮ್ಮಲ್ಲಿ ಸೂಕ್ತ ಸೌಲಭ್ಯವಿರುವ ಹಿನ್ನೆಲೆಯಲ್ಲಿ ಪಾಕ್ ಸೇನೆಯ ಸಹಾಯದ ಅಗತ್ಯವಿಲ್ಲ, ಸಹಾಯ ಮಾಡಲು ಮುಂದಾದ ಪಾಕಿಸ್ತಾನ ಸೇನೆಗೆ ಧನ್ಯವಾದ ತಿಳಿಸಿದ್ದೇವೆ ಎಂದು ಸೇನಾ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪಾಕಿಸ್ತಾನ ಸೇನೆ ಸಹಾಯ ನೀಡಲು ಮುಂದಾಗಿದ್ದನ್ನು ಸ್ವಾಭಾವಿಕ ಸಂಗತಿ ಎಂದಿರುವ ಸೇನಾ ವಕ್ತಾರರು ಗಡಿ ನಿಯಂತ್ರಣ ರೇಖೆ ಬಳಿ ಇಂತಹ ಘಟನೆಗಳು ನಡೆದಾಗ ಸಹಾಯ ಮಾಡಲು ಮುಂದಾಗುವುದು ಸ್ವಾಭಾವಿಕ ಎಂದು ಹೇಳಿದ್ದಾರೆ.
ಭಾರತೀಯ ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಅವರಿಗೆ ಕರೆ ಮಾಡಿದ್ದ ಪಾಕಿಸ್ತಾನ ಸೇನೆಯ ಸೇನಾ ಕಾರ್ಯಾಚರಣೆಗಳ ಪ್ರಧಾನ ನಿರ್ದೇಶಕ ಸಾಹಿರ್ ಶಂಶಾದ್ ಮಿರ್ಜಾ, ಸಿಯಾಚಿನ್ ನಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಗೆ ಅಗತ್ಯ ಸಹಾಯ ಮಾಡುವುದಾಗಿ ಹೇಳಿದ್ದರು.