

ನವದೆಹಲಿ: ಬಸ್ ಗಳಲ್ಲಿ ಇರುವಂತೆ ರೈಲಲ್ಲೂ ಇನ್ನು ಮುಂದೆ ಟಿಕೆಟ್ ಕಂಡಕ್ಟರ್ ಸೇವೆಯನ್ನು ಆರಂಭಿಸಲು ಭಾರತೀಯ ರೈಲ್ವೇ ಇಲಾಖೆ ನಿರ್ಧಾರ ಕೈಗೊಂಡಿದೆ.
ಟಿಕೆಟ್ ರಹಿತ ಪ್ರಯಾಣ ಮಾಡುವ ಪ್ರಯಾಣಿಕರು ದುಬಾರಿ ದಂಡ ನೀಡುವುದನ್ನು ತಪ್ಪಿಸಲು ರೈಲ್ವೇ ಇಲಾಖೆ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಈ ಕ್ರಮವನ್ನು ಪ್ರಾಯೋಗಿಕವಾಗಿ ಜಾರಿಗೆ ತರಲು ಇಲಾಖೆ ನಿರ್ಧರಿಸಿದ್ದು, ಆರಂಭಿಕ ಹಂತವಾಗಿ ಉತ್ತರ ಪ್ರದೇಶದ ಮುಘಲ್ ಸರಾಯ್‍ನಲ್ಲಿ ಇದನ್ನು ಜಾರಿಗೆ ತರಲಾಗಿದೆ. ಮು೦ದಿನ ಮೂರು ತಿ೦ಗಳಲ್ಲಿ ಇದರ ಸಾಧ್ಯಾ-ಸಾಧ್ಯತೆಗಳನ್ನು ಪರಿಶೀಲಿಸಿ ದೇಶಾದ್ಯ೦ತ ಜಾರಿಗೊಳಿಸಲು ನಿರ್ಧರಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಚಲಿಸುವ ರೈಲಿನಲ್ಲಿರುವ ನಿರ್ವಾಹಕರೇ ಪ್ರಯಾಣಿಕರಿ೦ದ ಹಣ ಪಡೆದು ಟಿಕೆಟ್ ನೀಡಲಿದ್ದಾರೆ. ಇದರಿ೦ದ ಟಿಕೆಟ್ ರಹಿತ ಪ್ರಯಾಣಕ್ಕೆ ಸಾರ್ವಜನಿಕರಿ೦ದ ದ೦ಡ ವಸೂಲಿ ಮಾಡುವುದು ತಪ್ಪುತ್ತದೆ. ಅಲ್ಲದೆ, ರೈಲ್ವೇ ನಿಲ್ದಾಣದಲ್ಲಿ ಟಿಕೆಟ್ ನೀಡಿಕೆಯನ್ನು ಖಾಸಗಿಯವರಿಗೆ ವಹಿಸುವುದರಿ೦ದ ವ್ಯವಸ್ಥೆ ಇನ್ನಷ್ಟು ಸುಧಾರಿಸಲಿದೆ ಎ೦ದು ಅವರು ಅಭಿಪ್ರಾಯಪಟ್ಟಿದ್ದಾರೆ.