
ನವದೆಹಲಿ: ಪಠಾಣ್ ಕೋಟ್ ದಾಳಿಯ ಪ್ರಮುಖ ರುವಾರಿಯಾಗಿರುವ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಮೇಲೆ ನಿಷೇಧ ಹೇರುವಂತೆ ಕೋರಿ ಶೀಘ್ರದಲ್ಲೇ ಭಾರತ ವಿಶ್ವಸಂಸ್ಥೆ ಮೇಲೆ ಒತ್ತಡ ಹೇರಲಿದೆ ಎಂದು ತಿಳಿದುಬಂದಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, "ಪಠಾಣ್ ಕೋಟ್ ದಾಳಿ ಪ್ರಕರಣ ಕುರಿತಂತೆ ಮಸೂದ್ ಅಜರ್ ಮೇಲೆ ನಿಷೇಧ ಹೇರಿಕೆಗಾಗಿ ಭಾರತ ವಿಶ್ವಸಂಸ್ಥೆಯ ನಿಷೇಧ ಸಮಿತಿಯ ಮೊರೆ ಹೋಗುತ್ತಿದೆ. ದಾಳಿ ಸಂಬಂಧ ಈಗಾಗಲೇ ಸಮಿತಿಗೆ ಪಟ್ಟಿಯೊಂದನ್ನು ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
ಪಟ್ಟಿಯಲ್ಲಿ ಪಾಕಿಸ್ತಾನಕ್ಕೆ ಸೇರಿದ ವಿವಿಧ ಉಗ್ರ ಸಂಘಟನೆಗಳ 11 ಭಯೋತ್ಪಾದಕರ ಹೆಸರನ್ನು ಸೂಚಿಸಲಾಗಿದೆ. ದಾಳಿ ಸಂಬಂಧ ಪಾಕಿಸ್ತಾನದ ವಿಶೇಷ ತಂಡ ನಡೆಸುತ್ತಿರುವ ತನಿಖೆಯ ವರದಿಗಾಗಿ ಭಾರತ ಕಾಯುತ್ತಿದ್ದು, ವಿದೇಶಾಂಗ ಕಾರ್ಯದರ್ಶಿಗಳು ಪಾಕಿಸ್ತಾನದೊಂದಿಗೆ ಸಂಪರ್ಕದಲ್ಲಿದ್ದಾರೆ. ಪಾಕಿಸ್ತಾನದ ತನಿಖಾ ವರದಿ ಕೈ ಸೇರಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ವಿಕಾಸ್ ಸ್ವರೂಪ್ ಹೇಳಿದರು
Advertisement