

ನವದೆಹಲಿ: ವಾಯು ಮಾಲಿನ್ಯ ನಿಯಂತ್ರಣಕ್ಕೆ ದೆಹಲಿ ಸರ್ಕಾರ ಕೈಗೊಂಡ ಕಠಿಣ ಕ್ರಮಗಳಿಂದಾಗಿ ಕೇವಲ 2 ದಿನಗಳ ಅವಧಿಯಲ್ಲಿ ಶೇ.300ರಷ್ಟು ವಾಯು ಮಾಲಿನ್ಯ ಕಡಿಮೆಯಾಗಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಮನೀಶ್ ಸಿಸೋಡಿಯಾ ಅವರು, ನೂತನ ವರ್ಷಾಂರಭದಿಂದ ದೆಹಲಿಯಲ್ಲಿ ಸರ್ಕಾರ ಜಾರಿಗೆ ತಂದಿರುವ ಸಮ, ಬೆಸ ಸಂಖ್ಯೆ ಯೋಜನೆ ಯಶಸ್ವಿ ಕಂಡಿದ್ದು, ಕೇವಲ ಎರಡು ದಿನದಲ್ಲಿ ಶೇ.ಶೇ.300ರಷ್ಟು ವಾಯು ಮಾಲಿನ್ಯ ಕಡಿಮೆಯಾಗಿದೆ. ಸಮ, ಬೆಸ ಸಂಖ್ಯೆಯ ವಾಹನಗಳಿಗೆ ದಿನ ಬಿಟ್ಟು ದಿನ ಅವಕಾಶ ನೀಡುವ ದೆಹಲಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಜನತೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸರ್ಕಾರದ ಈ ನೂತನ ಕ್ರಮ ಹಲವರಲ್ಲಿ ಗೊಂದಲ, ಗಲಿಬಿಲಿ ಉಂಟು ಮಾಡಿದ್ದರೆ, ರಾಜಕೀಯ ಪಕ್ಷಗಳು ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿವೆ. ಸಾಕಷ್ಟು ಸಿದ್ಧತೆ ಇಲ್ಲದೆಯೇ ಯೋಜನೆ ಜಾರಿಗೊಳಿಸಲಾಗಿದೆ ಎಂದು ಬಿಜೆಪಿ ಆಕ್ಷೇಪಿಸಿದೆ. ಆದರೆ ಯೋಜನೆಯ ಯಶಸ್ಸನ್ನು ನಿರ್ಣಯಿಸಲು ಎಲ್ಲರೂ ಕಾದು ನೋಡಬೇಕಿದೆ ಎಂದು ಸಿಸೋಡಿಯಾ ಹೇಳಿದರು. "ಹೊಸ ವರ್ಷದಂದು ಆರಂಭವಾದ ಈ ಯೋಜನೆಯಿಂದ ನಗರದ ರಸ್ತೆಗಳಲ್ಲಿ ವಾಹನಗಳು ಕಡಿಮೆ ಇದ್ದವು. ಜನರಿಗೆ ಅನಾನುಕೂಲ ತಪ್ಪಿಸಲು ಸಾರ್ವಜನಿಕ ಸಾರಿಗೆಯನ್ನು ಹೆಚ್ಚಿಸಲಾಗಿತ್ತು. ಯೋಜನೆ ಜಾರಿಗೆ ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿತ್ತು. ರಜೆಯ ಮಜಾ ಕಳೆದು ಕಾರ್ಮಿಕರು, ನೌಕರರು ನಾಳೆಯಿಂದ ಕಚೇರಿಗಳತ್ತ ಮುಖ ಮಾಡಲಿದ್ದಾರೆ. ಹೀಗಾಗಿ ಸೋಮವಾರ ಹೆಚ್ಚು ಸಂಚಾರ ದಟ್ಟಣೆ ಇರುವ ದಿನವಾಗಿದ್ದು, ಜನರು ಯಾವ ರೀತಿ ಸ್ಪಂದಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ" ಎಂದು ಅವರು ಕುತುಹಲ ವ್ಯಕ್ತಪಡಿಸಿದರು.
ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ದೆಹಲಿ ಸರ್ಕಾರ ಕೈಗೊಂಡಿದ್ದ ಸಮ-ಬೆಸ ಸಂಖ್ಯೆ ನೀತಿ ಜನವರಿ 15ರವರೆಗೆ ಒಂದನೇ ಹಂತದಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ. ನಂತರದಲ್ಲಿ ಯೋಜನೆಯ ಸಾಧಕ ಬಾಧಕಗಳನ್ನು ಪರಿಶೀಲಿಸಿ ಮುಂದುವರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ದೆಹಲಿ ಸರ್ಕಾರ ಹೇಳಿದೆ. ಸದ್ಯ 25 ವಿಧದ ವಾಹನಗಳಿಗೆ ನೂತನ ನೀತಿಯಿಂದ ವಿನಾಯಿತಿ ನೀಡಲಾಗಿದೆ. ಮಹಿಳೆಯರಿಗೆ ನೀಡಲಾಗಿರುವ ವಿನಾಯಿತಿಯನ್ನು ಎರಡನೇ ಹಂತದಲ್ಲಿ ತೆಗೆದುಹಾಕುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಸಿಸೋಡಿಯಾ ಇದೇ ವೇಳೆ ಹೇಳಿದರು.