ಹೆಚ್ಎಎಲ್ ಹೆಲಿಕಾಫ್ಟರ್ ತಯಾರಿಕಾ ಘಟಕ ವಿಶ್ವದ ಗಮನ ಸೆಳೆಯಲಿರುವ ಕಾರ್ಖಾನೆಯಾಗಲಿದೆ: ಮೋದಿ

ಪ್ರಧಾನಿ ನರೇಂದ್ರ ಮೋದಿ, ಗುಬ್ಬಿ ತಾಲೂಕಿನ ಬಿದಿರೆಹಳ್ಳಿ ಕಾವಲ್ ನಲ್ಲಿ ನಿರ್ಮಾಣವಾಗಲಿರುವ ಹೆಚ್ಎಎಲ್ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ಜ.3 ರಂದು ಶಿಲಾನ್ಯಾಸ ನೆರವೇರಿಸಿದ್ದಾರೆ.
ನರೇಂದ್ರ ಮೋದಿ (ಸಂಗ್ರಹ ಚಿತ್ರ)
ನರೇಂದ್ರ ಮೋದಿ (ಸಂಗ್ರಹ ಚಿತ್ರ)
Updated on: 

ತುಮಕೂರು: ಪ್ರಧಾನಿಯಾದ ನಂತರ ಎರಡನೇ ಬಾರಿಗೆ ತುಮಕೂರು ಜಿಲ್ಲೆಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಗುಬ್ಬಿ ತಾಲೂಕಿನ ಬಿದಿರೆಹಳ್ಳಿ ಕಾವಲ್ ನಲ್ಲಿ ನಿರ್ಮಾಣವಾಗಲಿರುವ ಹೆಚ್ಎಎಲ್ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ಜ.3 ರಂದು  ಶಿಲಾನ್ಯಾಸ ನೆರವೇರಿಸಿದ್ದಾರೆ.
ಶಿಲಾನ್ಯಾಸ ಕಾರ್ಯಕ್ರಮದ ನಂತರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಲ್ಲಿ ಅಸ್ತಿತ್ವಕ್ಕೆ ಬರುತ್ತಿರುವುದು ಸಾಮಾನ್ಯ ಕಾರ್ಖಾನೆಯಲ್ಲ, ದೇಶದ ರಕ್ಷಣೆಗೆ ಹೆಲಿಕಾಫ್ಟರ್ ತಯಾರಿಸುವ ಕಾರ್ಖಾನೆಯಾಗಿದ್ದು ಇದು ವಿಶ್ವದ ಗಮನಸೆಳೆಯಲಿರುವ ಕಾರ್ಖಾನೆಯಾಗಲಿದೆ ಎಂದು ಹೇಳಿದ್ದಾರೆ.
ಕೆಲವು ವರ್ಷಗಳ ಹಿಂದೆ ಭಾರತ ಆಹಾರಧಾನ್ಯಗಳನ್ನು ಆಮದು ಮಾಡಿಕೊಳ್ಳುವ ಸ್ಥಿತಿಯಲ್ಲಿತ್ತು. ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕರೆಗೆ ಓಗೊಟ್ಟ ನಮ್ಮ ರೈತರು ಜೈ ಕಿಸಾನ್ ಘೋಷಣೆಯನ್ನು ನಿಜ ಮಾಡಿದ್ದರು. ಪರೀಣಾಮ ನಾವು ಇಂದು ಆಹಾರಧಾನ್ಯಗಳ ವಿಷಯದಲ್ಲಿ ಸ್ವಾವಲಂಬಿಗಳಾಗಿದ್ದೆವೆ. ಅಂತೆಯೇ ಜೈ ಜವಾನ್ ಎಂಬುದು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮತ್ತೊಂದು ಘೋಷಣೆಯಾಗಿದ್ದು, ನಾವು ಸೇನೆಯ ಶಸ್ತ್ರಾಸ್ತ್ರಗಳ ವಿಷಯದಲ್ಲೂ ಸ್ವಾವಲಂಬಿಗಳಾಗಬೇಕಿದೆ ಎಂದು ಮೋದಿ ಹೇಳಿದ್ದಾರೆ.
"ನಮ್ಮ ಸೇನೆ ಬೇರೆ ಯಾವುದೇ ಸೇನೆಗಳಿಗಿಂತ ದುರ್ಬಲವಾಗಿರಬಾರದು, ಪ್ರಸ್ತುತ ನಾವು ಬೇರೆ ಬೇರೆ ದೇಶಗಳಿಂದ ಸೇನೆಗೆ ಶಸ್ತ್ರಾಸ್ತ್ರ ಖರೀದಿಸುತ್ತಿದ್ದೇವೆ, ಇದರಿಂದಾಗಿ ನಮಗೆ ಆಧುನಿಕ ಶಸ್ತ್ರಾಸ್ತ್ರ ಸಿಗುತ್ತಿಲ್ಲ. ಆದ್ದರಿಂದ ದೇಶಿಯವಾಗಿ ಶಸ್ತ್ರಾಸ್ತ್ರಗಳ ತಯಾರಿಕೆಗೆ ಮುಂದಾಗಿದ್ದು ವಿದೇಶಗಳೊಂದಿಗೆ ಶಸ್ತ್ರಾಸ್ತ್ರ ಖರೀದಿ ಒಪ್ಪಂದಕ್ಕೆ ಸಹಿ ಹಾಕುವಾಗ ಭಾರತದಲ್ಲೇ ಶಸ್ತ್ರಾಸ್ತ್ರ ತಯಾರಿ ಮಾಡಬೇಕೇಂಬ ಷರತ್ತು ವಿಧಿಸುತ್ತಿದ್ದೇವೆ ಎಂದು ಮೋದಿ ತಿಳಿಸಿದ್ದಾರೆ.  
2016 ರ ಶುಭಾರಂಭ ರಕ್ಷಣಾ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ, ಹೆಲಿಕಾಫ್ಟರ್ ತಯಾರಿಕಾ ಘಟಕ ಯೋಜನೆಗೆ 5000 ಕೋಟಿ ರೂಪಾಯಿ ಬಂಡವಾಳ ಹೂಡಲಾಗಿದ್ದು, 2018 ಕ್ಕೆ ಇಲ್ಲಿಂದ ತಯಾರಾದ ಹೆಲಿಕಾಫ್ಟರ್ ಗಳು ಹಾರಬೇಕು ಎಂದು ಮೋದಿ ಕರೆ ನೀಡಿದ್ದಾರೆ.
ಹೆಚ್ಎಎಲ್ ಹೆಲಿಕಾಫ್ಟರ್ ತಯಾರಿಕಾ ಘಟಕದಿಂದ ಪ್ರತ್ಯಕ್ಷ ಪರೋಕ್ಷವಾಗಿ 4000 ಕುಟುಂಬಗಳಿಗೆ ಉದ್ಯೋಗ ದೊರೆಯಲಿದ್ದು, 15 ವರ್ಷಕ್ಕೆ 600 ಹೆಲಿಕಾಫ್ಟರ್ ಗಳು ತಯಾರಾಗಬೇಕು ಎಂದು ಮೋದಿ ಹೇಳಿದ್ದಾರೆ. ಹೆಲಿಕಾಫ್ಟರ್ ತಯಾರಿಕಾ ಘಟಕದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ  ಸಿಎಂ ಸಿದ್ದರಾಮಯ್ಯ, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಕೇಂದ್ರ ಸಚಿವರಾದ ಅನಂತ್ ಕುಮಾರ್, ಸದಾನಂದ ಗೌಡ, ಗೃಹ ಸಚಿವ ಪರಮೇಶ್ವರ್, ಸಚಿವರಾದ ದೇಶಪಾಂಡೆ, ಜಯಚಂದ್ರ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com