ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ ಮತ್ತು ಬಿಜೆಪಿ ಮೈತ್ರಿಕೂಟ ಅಬಾಧಿತವಾಗಿರುವ ಬಗ್ಗೆ ಸೂಚನೆ ಲಭ್ಯವಾಗಿದೆ. ಬಿಜೆಪಿ ಜತೆಗೆ ಮೈತ್ರಿ ಮುಂದುವರಿಸುವ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳುವ ನಿರ್ಧಾರವನ್ನು ಪಿಡಿಪಿ ನಾಯಕರ ಸಭೆಯಲ್ಲಿ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿಗೆ ನೀಡಲಾಗಿದೆ.
ಇದರ ಜತೆಗೆ ಸರ್ಕಾರ ರಚನೆ ಬಗ್ಗೆ ಯಾವುದೇ ಷರತ್ತುಗಳನ್ನು ಒಡ್ಡಲಾಗಿಲ್ಲ ಎಂದೂ ಪಕ್ಷ ಹೇಳಿಕೊಂಡಿದೆ. ಬರೋಬ್ಬರಿ ಐದು ಗಂಟೆಗಳ ಕಾಲ ಈ ಬಗ್ಗೆ ಪಕ್ಷ ಸಭೆ ನಡೆಸಿತು. ಸಭೆಯ ಬಳಿಕ ಮಾತನಾಡಿದ ಪಿಡಿಪಿ ನಾಯಕ ನಯೀಮ್ ಅಖ್ತರ್ ``ಮೈತ್ರಿ ಮುಂದುವರಿಸುವ ಬಗ್ಗೆ ಮೆಹಬೂಬಾ ಮುಫ್ತಿಯವರೇ ನಿರ್ಣಯ ಕೈಗೊಳ್ಳಲು ಸಭೆಯಲ್ಲಿ ಒಮ್ಮತ ವ್ಯಕ್ತವಾಗಿದೆ.
ಇದರ ಜತೆಗೆ ಪಾಕಿಸ್ತಾನಕ್ಕೆ ಭೇಟಿ ನೀಡಿ ಅಲ್ಲಿನ ಪ್ರಧಾನಿಯವರನ್ನು ಭೇಟಿಯಾದ ಕ್ರಮದ ಬಗ್ಗೆ ಪಕ್ಷದ ನಾಯಕಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,'' ಎಂದು ಹೇಳಿದ್ದಾರೆ. ಮುಫ್ತಿ ಮೊಹಮ್ಮದ್ ಸಯೀದ್ ಜ.7ರಂದು ನಿಧನರಾದ ಬಳಿಕ ಮುಖ್ಯಮಂತ್ರಿ ಸ್ಥಾನ ತೆರವಾಗಿತ್ತು.