ಶ್ರೀನಗರ: ನಾಳೆಯೊಳಗೆ ಕಣಿವೆ ರಾಜ್ಯದಲ್ಲಿ ಸರ್ಕಾರ ರಚಿಸುವ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸುವಂತೆ ಬಿಜೆಪಿ ಹಾಗೂ ಪಿಡಿಪಿಗೆ ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಎನ್.ಎನ್.ವೊಹ್ರಾ ಅವರು ಸೂಚಿಸಿದ್ದಾರೆ.
ಕಾಶ್ಮೀರ ಮುಖ್ಯಮಂತ್ರಿಯಾಗಿದ್ದ ಮುಫ್ತಿ ಮೊಹಮ್ಮದ್ ಸಯೀದ್ ಅವರ ಸಾವಿನ ನಂತರ ಶೋಕಾಚರಣೆ ಹಿನ್ನೆಲಯಲ್ಲಿ ಅವರ ಪುತ್ರಿ ಮೆಹಬೂಬಾ ಮುಫ್ತಿ ಅವರು ಕಣಿವೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಜಮ್ಮು- ಕಾಶ್ಮೀರದಲ್ಲಿ ರಾಜ್ಯಪಾಲರ ಆಳ್ವಿಕೆ ಜಾರಿಯಲ್ಲಿದೆ. ಇಷ್ಟು ದಿನಗಳ ಕಾಲ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಬಿಜೆಪಿ ಮತ್ತು ಪಿಡಿಪಿ ಇದೀಗ ಮಹತ್ವದ ನಿರ್ಧಾರಕ್ಕೆ ಬರಲೇಬೇಕಾದ ಒತ್ತಡದ ಸನ್ನಿವೇಶ ಎದುರಿಸುತ್ತಿವೆ.
ಕೋರ್ ಕಮಿಟಿ ಸಭೆ ಕರೆದ ಬಿಜೆಪಿ
ರಾಜ್ಯಪಾಲರ ಸೂಚನೆ ಹಿನ್ನೆಲೆಯಲ್ಲಿ ಬಿಜೆಪಿ ಕೋರ್ ಕಮೀಟಿ ಸಭೆ ಕರೆದಿದ್ದು, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರ ಹೇಳಿಕೆ ಕುರಿತು ಚರ್ಚಿಸಲಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಗಾಂಧಿನಗರದಲ್ಲಿ ಬಿಜೆಪಿ ಕೋರ್ ಕಮೀಟಿ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್, ಮಾಜಿ ಸಚಿವರು ಹಾಗೂ ಸಂಸದರು ಮತ್ತು ಬಿಜೆಪಿ ರಾಜ್ಯಾಧ್ಯಕ್ಷರು ಭಾಗವಸಿದ್ದಾರೆ.
ರಾಜ್ಯದಲ್ಲಿನ ರಾಜಕೀಯ ಮತ್ತು ಆರ್ಥಿಕ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ತನ್ನ ಕಾಲಮಿತಿಯಲ್ಲಿ ಏನೆಲ್ಲಾ ಕ್ರಮ ಕೈಗೊಂಡಿದೆ ಎನ್ನುವುದನ್ನು ಪರಿಶೀಲಿಸಿದ ಬಳಿಕವೇ ಸರ್ಕಾರ ರಚನೆಗೆ ಮುಂದಾಗುವುದಾಗಿ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿದ್ದರು.