

ಮದುರೈ: ಫಾಸ್ಟ್ ಅಂಡ್ ಫ್ಯೂರಿಯಸ್ ಸಿನಿಮಾದ ಮಾದರಿಯಲ್ಲಿ ಸರಕು ಸಾಗಣೆ ವಾಹನಗಳಿಂದ ಸಾಮಾನುಗಳನ್ನು ಕದಿಯುತ್ತಿದ್ದ ಐದು ಮಂದಿ ದರೋಡೆಕೋರರನ್ನು ಮದುರೈ ಪೊಲೀಸರು ಬಂಧಿಸಿದ್ದಾರೆ.
ಆರು ಜನರ ತಂಡದಲ್ಲಿ ಪೊಲೀಸರು ಈಗಾಗಲೇ ಐದು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತಂಡದ ಪ್ರಮುಖ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ವಾರಾಂತ್ಯದಲ್ಲಿ ಸರಕು ತುಂಬಿಕೊಂಡು ಹೋಗುವ ಟ್ರಕ್ ಗಳೇ ಇವರ ಮೈನ್ ಟಾರ್ಗೆಟ್. ಮುಂಜಾನೆಯೇ ತಮ್ಮ ಕೆಲಸವನ್ನು ಆರಂಭಿಸುವ ಈ ತಂಡ. ಸರಿಯಾಗಿ ಕ್ಲೋಸ್ ಮಾಡಿರದ ಟ್ರಕ್ ಗಳನ್ನು ತಮ್ಮ ಒಮ್ನಿ ಕಾರಿನಲ್ಲಿ ಹಿಂಬಾಲಿಸುತ್ತಾರೆ. ಲಾರಿಗೆ ತೀರಾ ಹತ್ತಿರವಾಗಿ ಚಲಿಸುವ ಕಾರಿನಿಂದ ಒಬ್ಬ ಹಗ್ಗ ಹಿಡಿದುಕೊಂಡು ಲಾರಿ ಹತ್ತುತ್ತಾನೆ. ಚಲಿಸುವ ಕಾರಿನಿಂದ ಮತ್ತೊಂದು ವಾಹನಕ್ಕೆ ಜಿಗಿಯುವುದು ಅತ್ಯಂತ ಅಪಾಯಕಾರಿ, ಆದರೆ ಈ ತಂಡ ಇದನ್ನೇ ರೂಢಿಸಿಕೊಂಡಿತ್ತು.
ಲಾರಿಗೆ ಹತ್ತಿದ ಈ ವ್ಯಕ್ತಿ ಸಣ್ಣ ಪ್ರಮಾಣದಲ್ಲಿರುವ ಬಾಕ್ಸ್ ಗಳನ್ನು ಹಿಂದೆ ಬರುತ್ತಿರುವ ಒಮ್ನಿ ಕಾರಿನ ಮೇಲೆ ಕೂತಿರುವ ವ್ಯಕ್ತಿಗೆ ಎಸೆಯುತ್ತಿದ್ದ. ಅದನ್ನು ಹಿಡಿದು ಕಾರಿನಲ್ಲಿ ತುಂಬಿಸುತ್ತಿದ್ದರು. ಬಾಕ್ಸ್ ಗಳು ದೊಡ್ಡದಾಗಿದ್ದರೇ ಅದನ್ನು ರಸ್ತೆಗೆ ಎಸೆಯಲಾಗುತ್ತಿತ್ತು, ನಂತರ ಬಂದು ಅದನ್ನು ಸಂಗ್ರಿಹಿಸಿಕೊಳ್ಳುತ್ತಿದ್ದರು.
ಮಿಕ್ಸಿ, ಕುಕ್ಕರ್, ಗ್ರೈಂಡರ್, ಫ್ಯಾನ್, ಮತ್ತು ಇತರ ಎಲೆಕ್ಟ್ರಾನಿಕ್ಸ್ ವಸ್ತುಗಳು ಮತ್ತು ಬಟ್ಟೆಯ ಬಂಡಲ್ ಗಳನ್ನು ಈ ಖದೀಮರು ದರೋಡೆ ಮಾಡುತ್ತಿದ್ದರು. ಪಾರ್ಸೆಲ್ ಮಾಡುವ ಲಾರಿಗಳಿಂದ ಸರಕು ಲೂಟಿಯಾಗುತ್ತಿದೆ ಎಂದು ಕಳೆದ ತಿಂಗಳು ಈ ಸಂಬಂಧ ನಮಗೆ ಒಂದು ದೂರು ಬಂದಿತ್ತು. ಅದಾದ ನಂತರ ಇದೇ ರೀತೀ ಸುಮಾರು 3 ದೂರುಗಳು ದಾಖಲಾದವು ಎಂದು ಮದುರೈ ಎಸ್ ಪಿ ವಿಜಯೇಂದ್ರ ಬಿದರಿ ಹೇಳಿದರು.
ದೂರಿನ ಅನ್ವಯ ಎಸ್ ಪಿ ಮೂರು ವಿಶೇಷ ತಂಡಗಳನ್ನು ರಚಿಸಿದರು. ಜೊತೆಗೆ ಮೂವರ್ಸ್ ಮತ್ತು ಪ್ಯಾಕರ್ಸ್ ಕಂಪನಿಗಳ ಜೊತೆ ಚರ್ಚೆ ನಡೆಸಿ, ಹೆಚ್ಚಿನ ಮಾಹಿತಿ ಕಲೆ ಹಾಕಿದರು. ಮತ್ತೆ ಈ ರೀತಿಯ ಘಟನೆ ನಡೆದರೇ ಕೂಡಲೆ ಪೊಲೀಸರಿಗೆ ತಿಳಿಸುವಂತೆ ಸೂಚಿಸಿದರು.
ಭಾನುವಾರ ಬೆಳಗ್ಗೆ ವಡಾಯಿ ಪಟ್ಟಿಯಿಂದ ಉಡುಮಲೈ ಪೇಟ್ ಗೆ ಒಂದು ಜವಳಿ ಲೋಡ್ ಸಾಗಿಸಬೇಕಿತ್ತು. ಈ ವೇಳೆ ಮದುರೈನ ಆರ್ ಮಣಿಕಂದನ್ ಮತ್ತು ಸ್ವರಾಜ್ ಪುರಮ್ ಲಾರಿಯಲ್ಲಿ ಹೊರಟರು. ಮತ್ತೊಬ್ಬ ಚಾಲಕ ಇನ್ನೊಂದು ವಾಹನದಲ್ಲಿ ಲಾರಿಯನ್ನು ಹಿಂಬಾಲಿಸುತ್ತಿದ್ದ. ಈ ವೇಳೆ ದಿಂಡಿಗಲ್ ರೋಡ್ ಗೆ ಬರುತ್ತಿದ್ದಂತೆ ಒಮ್ನಿ ಕಾರಿನಲ್ಲಿ ಕೆಲವರು ಲಾರಿಯನ್ನು ಹಿಂಬಾಲಿಸುತ್ತಿದ್ದುದ್ದು ಗಮನಕ್ಕೆ ಬಂತು. ಈ ವೇಳೆ ಲಾರಿ ನಿಲ್ಲಿಸುವಂತೆ ಎಚ್ಚರಿಕೆ ನೀಡಲಾಯಿತು. ಲಾರಿ ನಿಂತ ಕೂಡಲೇ ಎಚ್ಚೆತ್ತುಕೊಂಡ ದರೋಡೆಕೋರರು ಅಲ್ಲಿಂದ ಪರಾರಿಯಾದರು.
ಓಮ್ನಿ ಕಾರಿನ ನಂಬರ್ ಮತ್ತು ಮಾಡೆಲ್ ಬರೆದುಕೊಂಡಿದ್ದೆ. ಪ್ರತಿದಿನದಂತೆ ರೌಂಡ್ಸ್ ಗೆ ತೆರಳಿದ್ದ ವೇಳೆ ವಡಿಪಟ್ಟಿ ಬೈಪಾಸ್ ನ ಗ್ರಾಮದೊಳಗೆ ಅದೇ ಓಮ್ನಿ ಕಾರು ಪಾಸ್ ಆಯಿತು. ಪೊಲೀಸರನ್ನು ನೋಡಿದ ಕೂಡಲೇ ಓಮ್ನಿ ಕಾರು ಪಕ್ಕದ ಊರೊಳಗೆ ತೆರಳಿತು. ನಂತರ ನಮ್ಮ ತಂಡ ಬೈಪಾಸ್ ನಿಂದ ಹೊರಗೆ ಹೋಗುವ ಮಾರ್ಗವನ್ನು ಬ್ಲಾಕ್ ಮಾಡಿ ದರೋಡೆಕೋರರನ್ನು ಹಿಡಿಯಿತು ಎಂದು ಡಿವೈಎಸ್ಪಿ ವೇಲ್ ಮುಗುಗನ್ ಹೇಳಿದ್ದಾರೆ.
ವಿ. ಸೆಲ್ವರಾಜ್, ಪರಮಶಿವಂ, ಎಂ. ರಾಜಮೂರ್ತಿ, ಎ. ಸಿವ ಅಲಿಯಾಸ್ ಸಿವಾಪಾಂಡಿಯನ್, ಮತ್ತು ಎಂ, ಪ್ರಭು ಬಂಧಿತರು, ಇವರೆಲ್ಲರೂ ದಿಂಡಿಗಲ್ ಜಿಲ್ಲೆಯವರಾಗಿದ್ದಾರೆ. ಶೀಘ್ರವೇ ಪ್ರಮುಖ ಆರೋಪಿಯನ್ನು ಬಂಧಿಸುವುದಾಗಿ ಪೊಲೀಸರು ಹೇಳಿದ್ದಾರೆ.